ಜುಲೈ 1 ರಂದು ಅನ್ನಭಾಗ್ಯ ಯೋಜನೆ ಜಾರಿ ಡೌಟ್: ಹೀಗೆ ಅಂತಾರೆ ಸಿಎಂ ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಜನರಿಗೆ ಐದು ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಸರಕಾರ ಈಗಾಗಲೇ ಒಂದು ಯೋಜನೆ ಜಾರಿಗಳಿಸಿದ್ದು, ಇದೀಗ ಎರಡನೇ ಯೋಜನೆಯಾದ ಬಿಪಿಎಲ್​ ಕಾರ್ಡ್​ದಾರರು ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ ಮಾಸಿಕ 10 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಹೇಳಿದ ಸಮಯಕ್ಕೆ ಜಾರಿಯಾಗುವ ಅನುಮಾನ ಕಾಡಿದೆ .

ಈ ಕುರಿತು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಷಯ ಬಹಿರಂಗಪಡಿಸಿದ್ದು, ಜುಲೈ 1ರಂದು ಅನ್ನಭಾಗ್ಯ ಯೋಜನೆ ಜಾರಿ ಅನುಮಾನ, ಸ್ವಲ್ಪ ವಿಳಂಬವಾಗಬಹುದು. ಕೇಂದ್ರದ ರಾಜಕೀಯದಿಂದಾಗಿ ಅಕ್ಕಿ ಹೊಂದಿಸಿಕೊಳ್ಳುವುದರಲ್ಲಿ ಸ್ವಲ್ಪ ತಡವಾಗಿದೆ ಎಂದು ಹೇಳಿದ್ದಾರೆ.

ನಾವು ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಕೇಳಿದ್ದೇವೆ, ಲಭ್ಯತೆ ನೋಡಿಕೊಂಡು ಜಾರಿ ಮಾಡಲಿದ್ದೇವೆ. ಅಕ್ಕಿ ಖರೀದಿ ಬಗ್ಗೆ ಕೇಂದ್ರ ಸರ್ಕಾರದ ಏಜೆನ್ಸಿಗಳ ಜತೆ ಚರ್ಚೆ ಜತೆಗೆ, ಕೇಂದ್ರೀಯ ಭಂಡಾರ, ನಫೆಡ್ ಸೇರಿ 3 ಸಂಸ್ಥೆಗಳ ಜತೆ ಕೊಟೇಷನ್ ಕೂಡ ಕೇಳಿದ್ದೇವೆ. ನಾಳೆ ಕೊಟೇಷನ್ ಸಿಗಲಿದೆ ಎಂದು ವಿವರಿಸಿದರು.

ನಾವು ರಾಜ್ಯದ ಜನರಿಗೆ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ. ಅದಕ್ಕಾಗಿ ಅನೇಕ ರಾಜ್ಯಗಳಲ್ಲಿ ಮನವಿ ಮಾಡಿದ್ದೇವೆ. ತೆಲಂಗಾಣ ಗೋಧಿ ನೀಡುತ್ತಿದೆ, ಛತ್ತೀಸ್​ಗಢ 1 ಲಕ್ಷ ಮೆಟ್ರಿಕ್ ಟನ್ ನೀಡುತ್ತಿದೆ, ಅದೂ ಒಂದು ತಿಂಗಳು ಮಾತ್ರ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಅದಾಗ್ಯೂ ಜುಲೈ 1ರಂದೇ ಯೋಜನೆ ಜಾರಿ ಮಾಡಲು ಪ್ರಯತ್ನಿಸುತ್ತೇವೆ ಎಂಬುದಾಗಿಯೂ ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!