September 30, 2026
Wednesday, September 30, 2026
spot_img

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಸಮರ: ಅ.2 ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಇಂಡಿಯಾ ಒಕ್ಕೂಟ, ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ರಕ್ಷಣೆಗಾಗಿ ಹಾಗೂ ಚುನಾವಣಾ ಆಯೋಗದ ಧೋರಣೆಯನ್ನು ಖಂಡಿಸಿ ಅ. 2 ರಿಂದ 8 ರವರೆಗೆ ದೇಶವ್ಯಾಪಿ ‘ಪ್ರಜಾಪ್ರಭುತ್ವ ಉಳಿಸಿ ಪಾದಯಾತ್ರೆ’ ಹಮ್ಮಿಕೊಳ್ಳುವುದಾಗಿ ಬುಧವಾರ ಘೋಷಣೆ ಮಾಡಿದೆ.

ದೆಹಲಿಯಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಒಕ್ಕೂಟದ ಪ್ರಮುಖ ನಾಯಕರ ಸಮನ್ವಯ ಸಮಿತಿ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

ಹಂತ ಹಂತವಾಗಿ ನಡೆಯಲಿರುವ ಪ್ರತಿಭಟನೆ

ಅ. 2 ರಿಂದ 8ರವರೆಗೆ ದೇಶದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಇಂಡಿಯಾ ಒಕ್ಕೂಟದ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ತದನಂತರ ಅ. 6 ರಂದು ಒಕ್ಕೂಟದ ಎಲ್ಲಾ ವಿರೋಧ ಪಕ್ಷಗಳ ಸಂಸದರು ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ಅಕ್ಟೋಬರ್ ಎರಡನೇ ವಾರ ಪ್ರಜಾಪ್ರಭುತ್ವ ಸಂಸ್ಥೆಗಳ ದುರ್ಬಳಕೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಒಕ್ಕೂಟದ ನಾಯಕರಿಂದ ಮನವಿ ಸಲ್ಲಿಕೆ ಮಾಡಲಾಗುತ್ತದೆ. ನವೆಂಬರ್ 1 ರಂದು ದೆಹಲಿಯಲ್ಲಿ ಬೃಹತ್ ಜಂಟಿ ರ್ಯಾಲಿ ನಡೆಸಲಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಒಟ್ಟು 5 ಬೃಹತ್ ರ್ಯಾಲಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಖರ್ಗೆ ವಿವರಿಸಿದರು.

ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗವು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಅನ್ಯಾಯದ ಮಾರ್ಗಗಳ ಮೂಲಕ ಚುನಾವಣೆಗಳನ್ನು ಗೆಲ್ಲಲಾಗುತ್ತಿದೆ. ಇದರ ವಿರುದ್ಧ ಒಕ್ಕೂಟದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಲಿವೆ ಎಂದು ತಿಳಿಸಿದರು.

ಪಿಎಂ-ಸಿಇಸಿರಾಜೀನಾಮೆ ನೀಡಬೇಕು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ʼಅವರು ಇವಿಎಂ ಯಂತ್ರಗಳನ್ನು ಹೈಜಾಕ್ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಆಕ್ರೋಶ

ʼಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಯತ್ನಿಸುತ್ತಿರುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ಮಾಡುವುದು ನಮ್ಮ ವೈಯಕ್ತಿಕ ಬದ್ಧತೆಯಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬುದು ಈಗ ದೇಶದ ಜನರಿಗೆ, ವಿಶೇಷವಾಗಿ ಯುವಕರಿಗೆ ಮನವರಿಕೆಯಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:

ಈ ಸಭೆಯಲ್ಲಿ ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್ ಸೇರಿದಂತೆ ಹಲವು ಪ್ರಮುಖ ವಿಪಕ್ಷ ನಾಯಕರು ಭಾಗವಹಿಸಿ ಒಮ್ಮತದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂಬರುವ ಐದು ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಹೋರಾಟವು ತೀವ್ರ ರಾಜಕೀಯ ಸಂಚಲನ ಮೂಡಿಸುವ ಸಾಧ್ಯತೆಯಿದೆ.

Must Read