ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಇನ್ನೂ ಸಮಯವಿದ್ದರೂ ಕಾಂಗ್ರೆಸ್ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಈಗಿನಿಂದಲೇ ವೇಗ ನೀಡಿದೆ. ಜಿಲ್ಲಾಮಟ್ಟದ ಸಂಘಟನೆಗೆ ಚುರುಕು ನೀಡುವ ಬೆನ್ನಲ್ಲೇ ಪಕ್ಷದ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಒಗ್ಗಟ್ಟಿನಿಂದ ಕೈಗೊಳ್ಳಲು ಹೊಸ ಸಮಿತಿ ರಚಿಸುವ ಚಿಂತನೆ ನಡೆದಿದೆ.
ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ರಾಜಕೀಯ ವ್ಯವಹಾರಗಳ ಸಮಿತಿ ರಚಿಸುವ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯರು ಹಾಗೂ ಪ್ರಭಾವಿ ನಾಯಕರನ್ನು ಒಳಗೊಂಡ ಸುಮಾರು 25ರಿಂದ 30 ಸದಸ್ಯರ ಸಮಿತಿ ರಚಿಸುವ ಪ್ರಸ್ತಾವನೆ ಇದ್ದು, ಪಕ್ಷದ ಪ್ರಮುಖ ರಾಜಕೀಯ ವಿಚಾರಗಳಲ್ಲಿ ಸಮನ್ವಯ ಸಾಧಿಸುವುದು ಇದರ ಉದ್ದೇಶವಾಗಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಹಿರಿಯ ನಾಯಕರ ಅಭಿಪ್ರಾಯಗಳನ್ನು ಪಡೆದು ಒಟ್ಟಾಗಿ ತೀರ್ಮಾನ ಕೈಗೊಳ್ಳಲು ಈ ಸಮಿತಿ ವೇದಿಕೆಯಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:
ರಾಜ್ಯದಲ್ಲಿ ರಾಜಕೀಯ ಸಂಘರ್ಷಗಳು ಎದುರಾದಾಗ ಪಕ್ಷದ ಮುಂದಿನ ಕಾರ್ಯತಂತ್ರ ರೂಪಿಸುವುದು, ವಿವಿಧ ರಾಜಕೀಯ ಹೋರಾಟಗಳ ಕುರಿತು ಚರ್ಚಿಸುವುದು ಹಾಗೂ ಪ್ರಮುಖ ಬೆಳವಣಿಗೆಗಳಿಗೆ ಪಕ್ಷದ ಪ್ರತಿಕ್ರಿಯೆ ನಿರ್ಧರಿಸುವಲ್ಲೂ ಸಮಿತಿ ಪಾತ್ರವಹಿಸುವ ಸಾಧ್ಯತೆಯಿದೆ.
ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಕಾಂಗ್ರೆಸ್‌ನ ಜಿಲ್ಲಾ ಘಟಕಗಳಿಗೆ ಸಂಘಟನೆ ಬಲಪಡಿಸುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾಧ್ಯಕ್ಷರ ಸಭೆಯಲ್ಲಿಯೂ ಪಕ್ಷದ ಸಂಘಟನೆ ಮತ್ತು ಚುನಾವಣಾ ಸಿದ್ಧತೆ ಕುರಿತು ಚರ್ಚೆ ನಡೆದಿದ್ದು, ನಾಯಕರು ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ.
ಒಟ್ಟಿನಲ್ಲಿ, ಚುನಾವಣೆಗೆ ಮುನ್ನ ಸಂಘಟನೆ ಬಲಪಡಿಸುವುದರ ಜೊತೆಗೆ ಪಕ್ಷದ ಆಂತರಿಕ ಸಮನ್ವಯಕ್ಕೂ ಒತ್ತು ನೀಡಲು ರಾಜ್ಯ ಕಾಂಗ್ರೆಸ್ ಹೊಸ ವ್ಯವಸ್ಥೆಯತ್ತ ಹೆಜ್ಜೆ ಇಡುತ್ತಿರುವುದು ಕುತೂಹಲ ಮೂಡಿಸಿದೆ.



