ಯಾವುದು ಆಯುರ್ವೇದವೋ ಅದೇ ಯೋಗ, ಯಾವುದು ಯೋಗವೋ ಅದೇ ಧರ್ಮ, ಯಾವುದು ಧರ್ಮವೋ ಅದೇ ಅಧ್ಯಾತ್ಮ. ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧವಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಭಾನುವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.

ಪಾಶ್ಚಿಮಾತ್ಯ ಪದ್ಧತಿಗಳು ರೋಗ ಬಂದ ಬಳಿಕ ಅದನ್ನು ಹೇಗೆ ಸರಿಪಡಿಸಬೇಕು ಎಂದು ಚಿಂತಿಸುತ್ತವೆ. ಆದರೆ ನಮ್ಮ ಪ್ರಾಚೀನರು ಆಯುರ್ವೇದದ ಮೂಲಕ ರೋಗ ಬರದಂತೆ ಸ್ವಸ್ಥವಾಗಿ ಬದುಕುವ ದಾರಿಯನ್ನು ಕಂಡುಕೊಂಡಿದ್ದಾರೆ. ಆಯುರ್ವೇದ, ಧರ್ಮಶಾಸ್ತ್ರ ಹಾಗೂ ಯೋಗಶಾಸ್ತ್ರ ಎಲ್ಲವೂ ಒಂದನ್ನೇ ಬೋಧಿಸುತ್ತಿದ್ದು, ಇಹದಲ್ಲೂ ಪರದಲ್ಲೂ ಸುಖವಾಗಿರುವ ದಾರಿಯನ್ನು ತೋರುತ್ತವೆ ಎಂದು ಅಭಿಪ್ರಾಯಪಟ್ಟರು.
ಜೀವಿಗಳ ಪ್ರಕೃತಿಯಲ್ಲಿ ಮಂದ, ತೀಕ್ಷ್ಣ, ವಿಷಮ ಹಾಗೂ ಸಮಾಗ್ನಿ ಎಂಬ ನಾಲ್ಕು ವಿಧವಾದ ಅಗ್ನಿಯಿದ್ದು, ಸಮಾಗ್ನಿಯನ್ನು ಸಾಧಿಸಿಕೊಂಡರೆ ಸ್ವಸ್ಥ ಜೀವನಕ್ಕೆ ರಹದಾರಿಯಾಗುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಗ್ನಿಯ ಅವಲೋಕನ ಮಾಡಿಕೊಳ್ಳಬೇಕು ಎಂದು ಆಯುರ್ವೇದ ಸೂಚಿಸಿದೆ. ಜಠರಾಗ್ನಿ ಕೆಟ್ಟರೆ ದೇಹ ಮತ್ತು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದೇಹವೆಂಬ ರಾಜ್ಯಕ್ಕೆ ಅಗ್ನಿಯೇ ರಾಜ ಎಂದು ಹೇಳಿದರು.

ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ
ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ ಸಮರ್ಪಿಸಲಾಯಿತು. ಆಹಾರದ ವಿಚಾರದಲ್ಲಿ ಸರಿ-ತಪ್ಪುಗಳನ್ನು ತಿಳಿಸಿಕೊಡುವ ಕಾರ್ಯ ನಡೆಯುತ್ತಿದ್ದು, ಸಮಾಜ ಇದರ ಸದುಪಯೋಗ ಪಡೆದುಕೊಳ್ಳಲಿ. ಹವ್ಯಕ ಮಹಾಸಭೆಯ ಜೊತೆ ಗುರುಪೀಠ ಸದಾ ಇರಲಿದೆ ಎಂದು ಶ್ರೀಗಳು ಆಶೀರ್ವದಿಸಿದರು.
ಮಹಾಸಭೆಯ ಪರವಾಗಿ ಮಾತನಾಡಿದ ಡಾ. ಗಿರಿಧರ ಕಜೆ, ಮಹಾಸಭೆ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳೆದು ಬಂದ ಸಂಸ್ಥೆಯಾಗಿದ್ದು, ಸಮಾಜದಲ್ಲಿ ನಮ್ಮ ಸಂಸ್ಕಾರವನ್ನು ಜಾಗೃತಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಮಹಾಸಭೆ ಹಾಕಿಕೊಂಡಿದ್ದು, ಇವೆಲ್ಲವಕ್ಕೂ ಶ್ರೀಗಳ ಮಾರ್ಗದರ್ಶನವನ್ನು ಪ್ರಾರ್ಥಿಸಿದರು.

ರವಿ ನಾರಾಯಣ ಪಟ್ಟಾಜೆ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಸೇರಿದಂತೆ ನಿರ್ದೇಶಕರು ಹಾಗೂ ಸಂಚಾಲಕರು ಉಪಸ್ಥಿತರಿದ್ದರು.
ಗೋಮಾಂತಕ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ವ್ಯಾಪಿಸಿರುವ ಗೋಮಾಂತಕ ಸಮಾಜವು ಶ್ರೀಮಠದ ಶಿಷ್ಯಭಾವದಲ್ಲಿ ಸೇರ್ಪಡೆಯಾಗಿದ್ದು, ಸಮಾಜದ ನೋವು-ನಲಿವುಗಳೊಂದಿಗೆ ಗುರುಪೀಠ ಸದಾ ಇರಲಿದೆ ಎಂದು ಶ್ರೀಗಳು ಆಶೀರ್ವದಿಸಿದರು.

ಗೋಮಾಂತಕ ಸಮಾಜದ ರಮೇಶ್ ನಾಯ್ಕ ಜೋಯಿಡಾ, ಭಾಸ್ಕರ ನಾರ್ವೇಕರ, ದೇವದಾಸ ಶೆಜವಾಡಕರ್, ದಿನಕರ ಅಂಕೋಲೇಕರ, ಗುರುನಾಥ ಕಾಮತ್ ಸೇರಿದಂತೆ ಗೋವಾ-ಕರ್ನಾಟಕ ಭಾಗದ ನೂರಾರು ಗೋಮಾಂತಕ ಸಮಾಜ ಬಂಧುಗಳು ಉಪಸ್ಥಿತರಿದ್ದು, ಸ್ವರ್ಣಪಾದುಕಾ ಪೂಜೆ ಸಮರ್ಪಿಸಿದರು.



