September 30, 2026
Wednesday, September 30, 2026
spot_img

‘ಬಿಜೆಪಿ ಸರ್ಕಾರದ ಆರ್ಥಿಕ ಅವಾಂತರದಿಂದ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿದೆ’: ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಗುತ್ತಿಗೆದಾರರ ಬಾಕಿ ಬಿಲ್ ವಿವಾದ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ʼಹಿಂದಿನ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಬಜೆಟ್ ಮಿತಿಗಿಂತಲೂ ಅಧಿಕ ಕಾಮಗಾರಿಗಳನ್ನು ಆರಂಭಿಸಿ ಆರ್ಥಿಕ ಅವಾಂತರ ಸೃಷ್ಟಿಸಿತ್ತು. ಅವರ ಈ ತಪ್ಪು ನಿರ್ಧಾರಗಳ ಹಿನ್ನೆಲೆಯಲ್ಲೇ ಹಣಕಾಸು ಇಲಾಖೆ ಈಗ ನಮಗೆ ಪತ್ರ ಬರೆದಿದೆʼ ಎಂದು ತಿರುಗೇಟು ನೀಡಿದ್ದಾರೆ.

ಬುಧವಾರ ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್‌ಬಿ ಹೆಲಿಪ್ಯಾಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಗುತ್ತಿಗೆದಾರರ ಸಂಘದ ಪತ್ರ ಹಾಗೂ ಶೇಕಡಾವಾರು ಕಮಿಷನ್ ಆರೋಪಗಳ ಕುರಿತು ಮುಕ್ತವಾಗಿ ಮಾತನಾಡಿದರು.

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಶೀಘ್ರ ಕ್ರಮ

ಗುತ್ತಿಗೆದಾರರ ಸಂಘವು ರೂ. 30,000 ಕೋಟಿಗೂ ಅಧಿಕ ಬಿಲ್ ಬಾಕಿ ಇರುವ ಬಗ್ಗೆ ಬರೆದಿರುವ ಪತ್ರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ʼಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಕಾಮಗಾರಿಗಳು ಈಗ ಪೂರ್ಣಗೊಳ್ಳುತ್ತಿವೆ, ಹೀಗಾಗಿ ಬಿಲ್‌ಗಳನ್ನು ನೀಡಲೇಬೇಕಾಗುತ್ತದೆ. ಗುತ್ತಿಗೆದಾರರೂ ಬದುಕಬೇಕಲ್ಲವೇ? ಆ ನಿಟ್ಟಿನಲ್ಲಿ ನಾನು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇನೆ” ಎಂದು ಗುತ್ತಿಗೆದಾರರಿಗೆ ಭರವಸೆ ನೀಡಿದರು.

ಕಮಿಷನ್ ಆರೋಪವಿದ್ದರೆ ಅಫಿಡವಿಟ್ ಸಲ್ಲಿಸಲಿ

ಪ್ರಸ್ತುತ ಸರ್ಕಾರದಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ಸವಾಲು ಹಾಕಿದ ಡಿ.ಕೆ. ಶಿವಕುಮಾರ್, ಅವರ ಬಳಿ ಸಾಕ್ಷ್ಯಗಳಿದ್ದರೆ ಮೊದಲು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಿ. ಆ ಬಳಿಕ ಅದರ ಬಗ್ಗೆ ಖಂಡಿತವಾಗಿಯೂ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ವೇಳೆ ಜಾತಿ ಪ್ರಮಾಣಪತ್ರ ಕೇಳಲಾಗುತ್ತಿದೆ ಎಂಬ ಗೊಂದಲಕ್ಕೆ ತೆರೆ ಎಳೆದ ಸಿಎಂ, ʼಹೊರ ರಾಜ್ಯದ ಜನರು ಇಲ್ಲಿನ ಯೋಜನೆಯ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಹೊಸ ಅರ್ಜಿ ಸಿದ್ಧಪಡಿಸಲಾಗಿದೆಯೇ ಹೊರತು, ಮರುಪರಿಶೀಲನೆಯ ಅರ್ಜಿಗಳನ್ನು ನಾವಿನ್ನೂ ವಿತರಿಸಿಲ್ಲ. ನಮ್ಮ ರಾಜ್ಯದ ಅರ್ಹ ಮತದಾರರಿಗೆ ಮಾತ್ರ ಯೋಜನೆ ಸಿಗಲಿದೆ ಎಂದರು.

ಚುನಾವಣಾ ಆಯೋಗದ ವಿರುದ್ಧ ಆಕ್ರೋಶ

ಸಿಡಬ್ಲ್ಯೂಸಿ ಸಭೆಯಲ್ಲಿ ಎಸ್‌ಐಆರ್ (SIR) ರದ್ದುಗೊಳಿಸುವ ನಿರ್ಧಾರದ ಕುರಿತು ಮಾತನಾಡುತ್ತಾ, ಮೋದಿ ಸರ್ಕಾರ ನೇಮಿಸಿದ ಇಬ್ಬರು ಕಮಿಷನರ್‌ಗಳೇ ಆಯೋಗದ ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯೋಗವು ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುತ್ತಿಲ್ಲ. ಬಡವರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ನೀರಾವರಿ ಯೋಜನೆ

 ರೂ. 490 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡುವ ಕುರಿತು ಪ್ರತಿಕ್ರಿಯಿಸಿ, ಇದು ಸಚಿವ ಸಂಪುಟ ಸಭೆ ಹಾಗೂ ವಿವಿಧ ಸಮಿತಿಗಳಲ್ಲಿ ಚರ್ಚೆಯಾಗಬೇಕಿದೆ. ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ನಿಯಮಾನುಸಾರ ಕೆಲಸ ಆರಂಭವಾಗಲಿದೆ ಎಂದರು.

ಚಾಮರಾಜನಗರವು ಮಲೆ ಮಹದೇಶ್ವರ ಹಾಗೂ ಸಿದ್ದಪ್ಪಾಜಿ ನೆಲೆಸಿರುವ ಪವಿತ್ರ ಭೂಮಿಯಾಗಿದ್ದು, ಈ ಹಿಂದುಳಿದ ಪ್ರದೇಶದ ನೀರಾವರಿ ಹಾಗೂ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

Must Read