ಪ್ರಾಧ್ಯಾಪಿಕೆಗೆ ಅನಾಮದೇಯ ಪತ್ರ, ಕರೆ ಮೂಲಕ ನಿರಂತರ ಕಿರುಕುಳ: ಮೂವರು ಸಹೋದ್ಯೋಗಿಗಳು ಪೊಲೀಸ್ ಬಲೆಗೆ!

ಹೊಸದಿಗಂತ ವರದಿ, ಮಂಗಳೂರು:

ಕಳೆದ ಮೂರು ತಿಂಗಳಿನಿಂದ ಕಗ್ಗಂಟಾಗಿ ಉಳಿದಿದ್ದ ನಗರದ ಕಾರ್‌ಸ್ಟ್ರೀಟ್ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಕುರಿತು ಮಾನಹಾನಿಕರ ಪತ್ರ, ಕರೆ ಹಾಗೂ ಪೋಸ್ಟರ್ ತಯಾರಿಸಿ ಕಿರುಕುಳ ನೀಡಿದ ಪ್ರಕರಣವನ್ನು ಕೊನೆಗೂ ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ಆರೋಪಿಗಳನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಖಾಸಗಿ ಶಿಕ್ಷಣ ಸಂಸ್ಥೆಯ ಸಂಚಾಲಕ, ಬೆಳ್ತಂಗಡಿ ತಾಲೂಕು ಲಾಯಿಲ ನಿವಾಸಿ ಪ್ರಕಾಶ್ ಶೆಣೈ(44), ಅದೇ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ(36) ಹಾಗೂ ದೈಹಿಕ ಶಿಕ್ಷಣ ಶಿಕ್ಷಕ, ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಬಿ.ಎಸ್.ಶೆಟ್ಟಿ(32) ಬಂಧಿತರು. ಈ ಆರೋಪಿಗಳಿಗೆ ಸಹಕರಿಸಿದ ಇನ್ನೂ ಮೂರು ಮಂದಿಯ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಪೋಸ್ಟರ್!
ಆರೋಪಿಗಳು ಅದೇ ಕಾಲೇಜಿನಲ್ಲಿದ್ದ ಪ್ರಾಧ್ಯಾಪಕಿ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಹಾಗೂ ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪೋಸ್ಟರ್‌ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಸಂತ್ರಸ್ತೆ ಮಹಿಳಾ ಪ್ರಾಧ್ಯಾಪಕಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!