ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ?: ಸಚಿವ ಎಂ.ಬಿ. ಪಾಟೀಲ್ ಕೊಟ್ರು ಸುಳಿವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಸಮೀಪದ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸ್ಥಳ ಹುಡುಕಾಟ ಚುರುಕುಗೊಳಿಸಿದೆ .

ಈ ಸಂಬಂಧ ಸಚಿವ ಎಂ.ಬಿ.ಪಾಟೀಲ್‌ ಅವರು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಸಭೆ ನಡೆಸಿದ್ದು, ರಾಜ್ಯದ ರಾಜಧಾನಿಯ ಸಮೀಪ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದನ್ನು ಎಲ್ಲಿ‌ ನಿರ್ಮಿಸಬೇಕು ಎನ್ನುವ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಮುಖ್ಯಮಂತ್ರಿಗಳ ಜತೆ ವಿಚಾರ ವಿನಿಮಯ ನಡೆಸಿ, ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಎರಡನೇ ಏರ್ಪೋರ್ಟ್ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್ ಜತೆ ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 2033ರವರೆಗೂ 150 ಕಿ.ಮೀ. ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಬಾರದು ಎಂಬ ಷರತ್ತಿದೆ. ಆದರೆ, ನಾವು ಈಗಿನಿಂದಲೇ ಕಾರ್ಯ ಪ್ರವೃತ್ತರಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂದರು.

ಪ್ರಯಾಣಿಕರ ಒತ್ತಡ ನೋಡಿದರೆ ಬೆಂಗಳೂರಿನ ದಕ್ಷಿಣ ಭಾಗ, ಕನಕಪುರ ಇತ್ಯಾದಿ ಭಾಗಗಳಿವೆ. ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ನೂತನ ವಿಮಾನ ನಿಲ್ದಾಣವು ಬರಬೇಕು ಎಂದಾದರೆ ದಾಬಸ್‌ಪೇಟೆ, ತುಮಕೂರು ಇತ್ಯಾದಿಗಳು ಬರುತ್ತವೆ. ಇವೆಲ್ಲವನ್ನೂ ಪರಿಗಣಿಸಿ ಸ್ಥಳ ನಿಗದಿ, ಭೂ ಸ್ವಾಧೀನ, ಪರಿಹಾರ ಹಂಚಿಕೆ ಇತ್ಯಾದಿಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ನುಡಿದರು.

ಮುಂಬೈ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳ ನಡುವೆ ಕೇವಲ 36 ಕಿ.ಮೀ. ಅಂತರವಿದೆ. ನ್ಯೂಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ಕೂಡ ಹೆಚ್ಚು ದೂರವಿಲ್ಲ. ಜೊತೆಗೆ, ಬಿಐಎಎಲ್ ಹೊಂದಿರುವ ಷರತ್ತು ತಮಿಳುನಾಡಿಗೂ ಅನ್ವಯಿಸುತ್ತದೋ ಇಲ್ಲವೋ ಪರಿಶೀಲಿಸಬೇಕು ಎಂದು ವಿವರಿಸಿದರು.

ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಮೇಲೆ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಏರ್ಪೋರ್ಟ್ ಕಟ್ಟುವುದಾಗಿ ಹೇಳುತ್ತಿದೆ. ಇದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಾಗುವುದು ಎಂದು ಪಾಟೀಲ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!