ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರವಾಸಿ ತಾಣ ಹರಿಹರೇಶ್ವರ ಸಮುದ್ರದಲ್ಲಿ ಅನುಮಾನಾಸ್ಪದ ದೋಣಿ ಪತ್ತೆ ಬೆನ್ನಲ್ಲೇ ಆತಂಕ ಮನೆ ಮಾಡಿದ್ದು, ಪೊಲೀಸರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಬೋಟ್ ನಲ್ಲಿ ಎಕೆ-47 ರೈಫಲ್‌ಗಳು ಪತ್ತೆಯಾಗಿವೆ. ಈ ಘಟನೆ ಸಂಚಲನ ಮೂಡಿಸಿದ್ದು, ಜಿಲ್ಲೆಯಾದ್ಯಂತ ಪೊಲೀಸರು ದಿಗ್ಬಂಧನ ವಿಧಿಸಿದ್ದಾರೆ.
ಈಗಾಗಲೇ ತನಿಖೆಗೆ ಇಳಿದ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇದರ ಜೊತೆಗೆ 26/11 ಮುಂಬೈ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಯೋಜನೆ ಇದು ಎಂದು ಹೇಳಲಾಗುತ್ತಿದೆ.
2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸುವ ಮುನ್ನ ಗುಜರಾತ್‌ನ ಪೋರ್ ಬಂದರ್‌ನಲ್ಲಿ ಇಂಥದ್ದೇ ರೀತಿಯ ಅನುಮಾನಾಸ್ಪದ ಬೋಟ್ ಪತ್ತೆಯಾಗಿತ್ತು. ಹೀಗಾಗಿ ದೋಣಿ ಪತ್ತೆಯಾಗಿರುವ ಪ್ರದೇಶ ಮುಂಬೈನಿಂದ 200 ಕಿಲೋ ಮೀಟರ್ ಹಾಗೂ ಪುಣೆಯಿಂದ 170 ಕಿಲೋ ಮೀಟರ್ ದೂರದಲ್ಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಕೆಲವು ದಿನಗಳಲ್ಲಿ ನಿರಂತರವಾಗಿ ಹಬ್ಬಗಳು ಬರಲಿದ್ದು ಇದರ ಬೆನ್ನಲ್ಲೇ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇನ್ನು ಈ ದೋಣಿ ಎಲ್ಲಿಂದ ಬಂತು ಮತ್ತು ಅದರಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು ಯಾರು ಕಳುಹಿಸಿದ್ದಾರೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಯಾರಾದರೂ ದೋಣಿಯಲ್ಲಿ ಬಂದಿದ್ದಾರೆಯೇ? ಬಂದಿದ್ದರೆ ಅವರು ಈಗ ಎಲ್ಲಿದ್ದಾರೆ? ಎನ್ನುವ ಮಾಹಿತಿಗಳನ್ನು ಪೊಲೀಸ್ ಕಲೆಹಾಕುತ್ತಿದ್ದಾರೆ.
ಇದಲ್ಲದೆ ಹರಿಹರೇಶ್ವರ ಕಡಲತೀರದ ಬಳಿ ದೋಣಿಯಲ್ಲಿ ಎಕೆ 47 ಪತ್ತೆಯಾಗಿರುವ ಬಗ್ಗೆ ರಾಯಗಡ ಎಸ್ಪಿ ಅಶೋಕ್ ಧುಧೆ ಖಚಿತಪಡಿಸಿದ್ದಾರೆ. ಹರಿಹರೇಶ್ವರ ಕಡಲತೀರದ ಬಳಿ ದೋಣಿಯಲ್ಲಿದ್ದ ಜನರು ತಮ್ಮ ಪ್ರವೇಶದ ಬಗ್ಗೆ ಕೋಸ್ಟ್ ಗಾರ್ಡ್‌ಗಳಿಗೆ ಮಾಹಿತಿ ನೀಡಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.