ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಭಾರತದ ಗಡಿಯಲ್ಲಿ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಭಾರತೀಯ ಸೇನೆಯು ಪಾಕ್ ಗೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ಇತ್ತ ಪಾಕಿಸ್ತಾನಕ್ಕೆ ಮತ್ತೊಂದು ಭಾಗದಲ್ಲೂ ದೊಡ್ಡ ಹೊಡೆತ ಬೀಳುತ್ತಿದೆ. ಬಲೂಚಿಸ್ತಾನದಲ್ಲಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನಿ ಸೇನೆಯ ವಿರುದ್ಧ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಬಲೂಚಿಸ್ತಾನದ 39 ವಿವಿಧ ಸ್ಥಳಗಳ ಮೇಲೆ ಬಿಎಲ್‌ಎ ದಾಳಿ ಮಾಡಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಿ ಪೊಲೀಸ್ ಠಾಣೆಗಳು ಮತ್ತು ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಮತ್ತು ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನಿ ಪೊಲೀಸ್ ಠಾಣೆಗಳು, ಪ್ರಮುಖ ಹೆದ್ದಾರಿಗಳು, ಸೇನಾ ಗೂಢಚಾರರು, ಪಾಕಿಸ್ತಾನಿ ಸೇನಾ ಶಸ್ತ್ರಾಸ್ತ್ರಗಳು ಮತ್ತು ಅವರ ಬೆಂಗಾವಲು ಪಡೆಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ ಎಂದು ಬಿಎಲ್‌ಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಇದರಿಂದ ಪಾಕಿಸ್ತಾನಿ ಸೇನೆಗೆ ಭಾರೀ ನಷ್ಟವಾಗಿದೆ.
ಮೇ 7ರಂದು, ಬೋಲನ್‌ನ ಮಾಚ್-ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಬಿಎಲ್‌ಎ ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಿತು. ಇದರಲ್ಲಿ 12 ಸೈನಿಕರು ಸಾವನ್ನಪ್ಪಿದ್ದಾರೆ. ಮೇ 8 ರಂದು ಕ್ವೆಟ್ಟಾದಲ್ಲಿನ ಮಿಲಿಟರಿ ನೆಲೆಗಳು ಮತ್ತು ಭದ್ರತಾ ಠಾಣೆಗಳ ಮೇಲೆ ಬಿಎಲ್‌ಎ ಆರು ದಾಳಿಗಳನ್ನು ನಡೆಸಿತು. ಈ ದಾಳಿಗಳಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ.