ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2024 ಕೊನೆಯಲ್ಲಿ ಅಂದರೆ ಸೋಮವಾರ (ಡಿ. 30) 99ನೇ ಯೋಜನೆಯಾದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪೆರಿಮೆಂಟ್’ (ಸ್ಪಾಡೆಕ್ಸ್) ಭಾಗವಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ 2 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ಪೋಲಾರ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್ ಪಿಎಸ್‌ಎಲ್‌ವಿ ರಾಕೆಟ್ ಎಸ್‌ಡಿಎಕ್ಸ್ 01 ಮತ್ತು ಎಸ್‌ಡಿಎಕ್ಸ್ 02 ಎಂಬ 2 ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ದಿದೆ.
ಇನ್ನು ಈ ಪ್ರಯೋಗ ಹೊಸ ವರ್ಷದಲ್ಲಿಯೂ ಮುಂದುವರಿಯಲಿದ್ದು, ʼ2025ರ ಜನವರಿಯಲ್ಲಿ ಇಸ್ರೋ ನಡೆಸಲಿರುವ ಮೊದಲ ಪ್ರಯೋಗ 100ನೇ ಯೋಜನೆಯಾಗಲಿದೆʼ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಜನವರಿಯಲ್ಲಿ ನಡೆಯಲಿದೆ ಎಂದು ಅವರು ಘೋಷಿಸಿದ ಅವರು ನಿರ್ದಿಷ್ಟ ದಿನಾಂಕವನ್ನೂ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.
100ನೇ ಮಿಷನ್ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (Geosynchronous Satellite Launch Vehicle) ಅಥವಾ ಜಿಎಸ್ಎಲ್‌ವಿ ಎಂಕೆ -2 ರಾಕೆಟ್‌ನಲ್ಲಿ ನಡೆಯಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಸ್ರೋ ಸ್ಥಾಪಿಸಿದ ಭಾರತೀಯ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು ಈ ಮಿಷನ್‌ನ ಉದ್ದೇಶ. ಈ ಯೋಜನೆಗೆ ಜಿಎಸ್ಎಲ್‌ವಿ-ಎಫ್ 15 / ಎನ್‌ವಿಎಸ್ -02 ಮಿಷನ್ (GSLV-F15/NVS-02 Mission) ಎಂದು ಹೆಸರಿಡಲಾಗಿದೆ.
ನ್ಯಾವಿಗೇಷನ್ ವಿಥ್ ದಿ ಇಂಡಿಯನ್ ಕಾನ್‌ಸ್ಟೆಲೇಷನ್ (NavIC) ಎಂಬುದು ಇಸ್ರೋ ಅಭಿವೃದ್ಧಿಪಡಿಸಿದ ಸ್ಥಳೀಯ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದೆ. ನೈಸರ್ಗಿಕ ವಿಕೋಪಗಳನ್ನು ಟ್ರ್ಯಾಕ್ ಮಾಡಲು ಅಥವಾ ಅವುಗಳ ಕುರಿತಾದ ಮಾಹಿತಿ ಕಲೆ ಹಾಕುವುದು, ಮೊಬೈಲ್ ಸಂಪರ್ಕ ಸಿಗದ ಆಳ ಸಮುದ್ರಗಳಿಗೆ ತೆರಳುವ ಮೀನುಗಾರರಿಗೆ ಎಚ್ಚರಿಕೆಯ ಸಂದೇಶದ ಮುನ್ಸೂಚನೆ ಕಳುಹಿಸುವುದು ಇದರ ಮುಖ್ಯ ಉದ್ದೇಶ. ನಾವಿಕ್ ವ್ಯವಸ್ಥೆ ಒಟ್ಟು ಏಳು ಉಪಗ್ರಹಗಳ ಗುಂಪು ಮತ್ತು ಭೂ ಕೇಂದ್ರಗಳ ಜಾಲವನ್ನು ಒಳಗೊಂಡಿದ್ದು, ಅವುಗಳು ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತವೆ.
ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ
ಡಿ. 30ರಂದು ಇಸ್ರೋ ಉಡಾವಣೆ ಮಾಡಿದ ರಾಕೆಟ್‌ನಿಂದ ನಿಗದಿತ ಕಕ್ಷೆಯನ್ನು ತಲುಪುವ ಎರಡು ಅವಳಿ ಉಪಗ್ರಹಗಳು ಮೊದಲು ದೂರವಾಗಿ, ನಂತರ ಕ್ರಮವಾಗಿ ಹತ್ತಿರ ಸೇರುತ್ತ, ನಂತರ ಒಂದೇ ಆಗಿ ಕಾರ್ಯಾಚರಣೆ ನಡೆಸಲಿವೆ. ಈ ಪ್ರಯೋಗ ಭಾರತದ್ದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ದಾರಿ ಮಾಡಿಕೊಡಲಿದೆ. ಆ ಮೂಲಕ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿರುವ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ. ಕ್ರಿಸ್ಟನ್ಡ್ ಭಾರತೀಯ ಡಾಕಿಂಗ್ ವ್ಯವಸ್ಥೆಯ ಈ ಯೋಜನೆಯಲ್ಲಿ ಅವಳಿ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಯಲ್ಲಿ ಸೇರಿಸಲು ಇಸ್ರೊ ಯೋಜನೆ ರೂಪಿಸಿದೆ.