Thursday, December 8, 2022

Latest Posts

ಮಡಿಕೇರಿಯಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿ

ಹೊಸದಿಗಂತ ವರದಿ,ಮಡಿಕೇರಿ :

ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಿಟ್ಟೂರು-ಕಾರ್ಮಾಡು ವ್ಯಾಪ್ತಿಯ ಬೆಂಡೆಕುತ್ತಿ ಕೆರೆ ಗ್ರಾಮದಲ್ಲಿ ನಡೆದಿದೆ.
ಹಸುಗಳನ್ನು ಮೇಯಿಸುತ್ತಿದ್ದಾಗ ಹಸುಗಳ ಗುಂಪಿನ ಮೇಲೆ ದಾಳಿ ಮಾಡಿದ ಹುಲಿ ಒಂದು ಹಸುವನ್ನು ಕೊಂದುಹಾಕಿದೆ. ಸ್ಥಳದಲ್ಲಿದ್ದ ಮಾಲಕ ರಾಜು ಕೂಗಾಡಿದಾಗ ಹುಲಿ ಕಾಡಿನತ್ತ ತೆರಳಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪಾಲ್, ಕಲ್ಲಳ್ಳ ವಲಯಾಧಿಕಾರಿ ಚೌಗುಲೆ, ಪಶುವೈದ್ಯ ಭವಿಷ್ಯ ಕುಮಾರ್ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.
ಈ ಸಂದರ್ಭ ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಉಪಾಧ್ಯಕ್ಷೆ ಪಡಿಞಾರಂಡ ಕವಿತಾ ಪ್ರಭು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಯಾವುದೇ ಜೀವ ಹಾನಿಯಾಗದಂತೆ ಎಚ್ಚರ ವಹಿಸಲು ಆಗ್ರಹಿಸಿದ್ದಾರೆ.
ಕೊಟ್ಟಿಗೆಗೆ ದಾಳಿ: ಮತ್ತೊಂದೆಡೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿರುವ ಘಟನೆ ಸಿದ್ದಾಪುರದ ಅವರೆಗುಂದ ಗ್ರಾಮದಲ್ಲಿ ನಡೆದಿದೆ.
ಸಮುದಾಯ ಭವನದ ಸಮೀಪವಿರುವ ಚಂದ್ರ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಬೆಳಗ್ಗೆ 11.30 ಗಂಟೆ ಸುಮಾರಿಗೆ ಹುಲಿದಾಳಿ ಮಾಡಿದೆ. ಮನೆಯವರು ಹೊರ ಬಂದು ಬೊಬ್ಬಿಟ್ಟಾಗ ಹಸುವನ್ನು ಅಲ್ಲೇ ಬಿಟ್ಟು ಹುಲಿ ಪರಾರಿಯಾಗಿದೆ. ಗಾಯಗೊಂಡಿರುವ ಹಸು ಪ್ರಾಣಾಪಾಯದಿಂದ ಪಾರಾಗಿದೆ.
ಸಿದ್ದಾಪುರ ಭಾಗದಲ್ಲಿ ಇತ್ತೀಚೆಗಷ್ಟೇ ಉಪಟಳ ನೀಡುತ್ತಿದ್ದ ಹುಲಿಯೊಂದನ್ನು ಸೆರೆ ಹಿಡಿಯಲಾಗಿತ್ತು. ಆದರೆ ಮತ್ತೆ ಹುಲಿ ಪ್ರತ್ಯಕ್ಷವಾಗಿರುವ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!