ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ .
ಈಗಾಗಲೇ ಡಿಪ್ ಫೇಕ್ ಗೆ ಸಂಬಂಧಿಸಿದಂತೆ ಕೆಲವರನ್ನು ಅರೆಸ್ಟ್ ಮಾಡಿದ್ದರೂ, ಮತ್ತೆ ರಶ್ಮಿಕಾರನ್ನು ಈ ಸುಳಿಯಲ್ಲಿ ಸಿಲುಕಿಸಲಾಗಿದೆ. ಮಾಡೆಲ್ ಕಂ ಕಂಟೆಂಟ್ ಕ್ರಿಯೇಟರ್ ಡೇನಿಯಾಲ ವಿಲ್ಲಾರ್ರಿಯಲ್ (Daniela Villarreal) ಅವರ ವಿಡಿಯೋಗೆ ರಶ್ಮಿಕಾರ ಮುಖವನ್ನು ಅಂಟಿಸಲಾಗಿದೆ.
ಡೀಪ್ ಫೇಕ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ ಕರ್ನಾಟಕ ಸರಕಾರ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿ, ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಡೀಪ್ ಫೇಕ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆಯೇ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಶುಕ್ರವಾರ ಹೇಳಿದ್ದರು.