May 24, 2026
Sunday, May 24, 2026
spot_img

ಮತ್ತೊಂದು ಆನೆ ಅವಾಂತರ: ತ್ರಿಶೂರ್‌ನಲ್ಲಿ ರೊಚ್ಚಿಗೆದ್ದ ‘ಶಿವಲಕ್ಷ್ಮಿ’ಯಿಂದ‌ ಕಾರು, ಮನೆಗಳು ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳದ ತ್ರಿಶೂರ್‌ನಲ್ಲಿ ಆನೆಯೊಂದು ಹಠಾತ್ತನೆ ರೊಚ್ಚಿಗೆದ್ದು ಓಡಿ, ಹಲವು ವಾಹನಗಳು ಮತ್ತು ವಸತಿ ಆಸ್ತಿಪಾಸ್ತಿಗಳನ್ನು ಜಖಂಗೊಳಿಸಿದೆ. ಈ ಘಟನೆಯು ಪ್ರಸಿದ್ಧ ವಡಕ್ಕುಮ್ನಾಥನ್ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಆತಂಕ ಮೂಡಿಸಿದೆ.

ಮನೆಗಳ ಗೇಟ್‌, ವಾಹನಗಳ ಮೇಲೆ ದಾಳಿ

‘ಶಿವಲಕ್ಷ್ಮಿ ಅಯ್ಯಪ್ಪನ್’ ಎಂದು ಗುರುತಿಸಲಾದ ಈ ಆನೆಯನ್ನು ಕೊಲ್ಲಂನಿಂದ ತ್ರಿಸೂರ್‌ಗೆ ಕರೆತರಲಾಗಿತ್ತು. ದೇವಸ್ಥಾನದ ಹೊರಗೆ ಫೋಟೋ ಸೆಷನ್ ನಡೆಯುತ್ತಿದ್ದಾಗ ನಿಯಂತ್ರಣ ತಪ್ಪಿದ ಆನೆಯು ಹಲವು ಕಿಲೋಮೀಟರ್‌ಗಳವರೆಗೆ ಓಡಿದೆ. ವಸತಿ ವಲಯಗಳ ಮೂಲಕ ನುಗ್ಗಿದ ಆನೆಯು ಮನೆಗಳ ಗೇಟ್‌ಗಳು, ಕಾಂಪೌಂಡ್ ಗೋಡೆಗಳು ಮತ್ತು ಕಾರುಗಳು ಹಾಗೂ ಆಟೋರಿಕ್ಷಾಗಳು ಸೇರಿದಂತೆ ಹಲವು ವಾಹನಗಳನ್ನು ಜಖಂಗೊಳಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಫೋಟೋ ಸೆಷನ್ ವೇಳೆ ದೇವಸ್ಥಾನದ ದಕ್ಷಿಣ ಗೋಪುರದ ಪ್ರವೇಶ ದ್ವಾರದ ಬಳಿ ಆನೆಯು ಏಕಾಏಕಿ ಉದ್ರೇಕಗೊಂಡಿದೆ. ನಂತರ ಹತ್ತಿರದ ಬೀದಿಗಳಲ್ಲಿ ನುಗ್ಗಿದ ಕಾರಣ ಸಾರ್ವಜನಿಕರಲ್ಲಿ ಭಾರಿ ಭೀತಿ ಉಂಟಾಯಿತು.

ಇದನ್ನೂ ಓದಿ:

ಕಾರಿನಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರು

ವರದಿಗಳ ಪ್ರಕಾರ, ಕಾರಿನ ಒಳಗಿದ್ದ ಸಂಗೀತ ಎಂಬ ಮಹಿಳೆ ಆನೆಯ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆನೆಯು ಆಕೆಯ ಕಾರನ್ನು ಮೇಲಕ್ಕೆತ್ತಿ ತಲೆಕೆಳಗು ಮಾಡಿತ್ತು. ಆನೆ ಅಲ್ಲಿಂದ ಮುಂದೆ ಹೋದ ನಂತರ ಸ್ಥಳೀಯರು ತನ್ನನ್ನು ಕಾರಿನಿಂದ ಹೊರಗೆಳೆದರು ಎಂದು ಅವರು ತಿಳಿಸಿದ್ದಾರೆ.

ಒಂದು ಗಂಟೆ ಕಾರ್ಯಾಚರಣೆ ಬಳಿಕ ಹತೋಟಿ

ರೊಚ್ಚಿಗೆದ್ದ ಆನೆಗೂ ಗಾಯಗಳಾಗಿದ್ದು, ಅದರ ಕಿವಿಯಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ನಂತರ ಆನೆಯನ್ನು ಹತೋಟಿಗೆ ತರಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಚಿವ ಒ.ಜೆ. ಜನೀಶ್, ಅಧಿಕಾರಿಗಳು ನಷ್ಟದ ಮೌಲ್ಯಮಾಪನ ಮಾಡಿದ ತಕ್ಷಣವೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !