ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ವಿದ್ಯಾರ್ಥಿಗಳ ದಂಗೆಯಿಂದ ದೇಶದಿಂದ ಪಲಾಯನ ಮಾಡಿ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಳಿಕ ಅಲ್ಲಿ ನೋಬಲ್ ಶಾಂತಿ ಪ್ರಶಸ್ತಿ ಪುರುಸ್ಕೃತ ಮುಹಮ್ಮದ್ ಯೂನಸ್ ಅವರು ಹಂಗಾಮಿ ಸರ್ಕಾರ ರಚಿಸಿ ಮುಖ್ಯ ಸಲಹೆಗಾರನಾಗಿ ಆಡಳಿತ ನಡೆಸುತ್ತಿದ್ದಾರೆ.
ಇದೀಗ ಶೇಖ್ ಹಸೀನಾ ಪಲಾಯನ ಮಾಡುತ್ತಿದ್ದಂತೆ ಸರ್ಕಾರ ರಚಿಸ ಬಹುದು ಎಂದು ನಂಬಲಾಗಿದ್ದ ಖಲೀದಾ ಜಿಯಾ ಅವರು ಸಹ ಇದೀಗ ಬಾಂಗ್ಲಾ ಬಿಟ್ಟು ಇಂಗ್ಲೆಂಡ್ಗೆ ತೆರಳಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ವಿದ್ಯಾರ್ಥಿ ದಂಗೆಯ ನಂತರ, ಖಲೀದಾ ಜಿಯಾ ಅವರು ಅಧಿಕಾರವನ್ನು ಹಿಡಿಯುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಐದು ತಿಂಗಳು ಕಳೆದರೂ ಅಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಈಗ 18 ವರ್ಷಗಳ ಹಿಂದೆ ಶೇಖ್ ಹಸೀನಾ ಅವರೊಂದಿಗೆ ಏನಾಯಿತೊ ಅದು ಖಲೀದಾ ಜಿಯಾ ಅವರೊಂದಿಗೆಯೂ ಇದೀಗ ಪುನರಾವರ್ತಿಸಲಾಗುತ್ತಿದೆ ಎನ್ನಲಾಗಿದೆ. ಯಾಕೆಂದರೆ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ಯಾಕೆಂದರೆ ಅವರ ಹಂಗಾಮಿ ಸರ್ಕಾರದ ಸದಸ್ಯರು ಹೊಸ ರಾಜಕೀಯ ಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ನಾಯಕಿ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರು ಅನಾರೋಗ್ಯದ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ ತಲುಪಿದ್ದಾರೆ. ಆದರೆ ಅವರು ಮಧ್ಯರಾತ್ರಿ ಲಂಡನ್‌ಗೆ ತೆರಳಿದ್ದ ಬಗೆಗೆ ಹಲವು ಪ್ರಶ್ನೆಗಳು ಎದ್ದಿವೆ.
ದೇಶದಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಸಲು ಆಗ್ರಹಗಳು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಅವರು ದೇಶ ಬಿಟ್ಟು ಹೋಗಿರುವುದು ಅಚ್ಚರಿಯ ಹೆಜ್ಜೆ ಎನ್ನುತ್ತಾರೆ ತಜ್ಞರು.
ಖಲೀದಾ ಜಿಯಾ ವಾಪಸಾತಿ ಡೌಟ್?
ಸೇನಾ ಮುಖ್ಯಸ್ಥ ವಕಾರ್-ಉಸ್-ಜಮಾನ್ ಇತ್ತೀಚೆಗೆ ಖಲೀದಾ ಜಿಯಾ ಅವರನ್ನು ಭೇಟಿಯಾದ ಕಾರಣ ಪ್ರಶ್ನೆಗಳನ್ನು ಹಲವು ಎತ್ತಲಾಗುತ್ತಿದೆ. ಇದಾದ ಕೆಲವೇ ದಿನಗಳಲ್ಲಿ ಖಲೀದಾ ಜಿಯಾ ಲಂಡನ್‌ಗೆ ತೆರಳಿದ್ದಾರೆ. ಯಾಕೆಂದರೆ ಅವರ ಮಗ, ಸೊಸೆ ಮತ್ತು ಮಕ್ಕಳು ಲಂಡನ್‌ನಲ್ಲಿದ್ದಾರೆ. ಏಳು ವರ್ಷಗಳ ನಂತರ ಅವರು ತಮ್ಮ ಮಗ ಮತ್ತು ಅವರ ಕುಟುಂಬವನ್ನು ಭೇಟಿಯಾಗುತ್ತಿದ್ದಾರೆ. ಹೀಗಾಗಿ ಸೇನಾ ಮುಖ್ಯಸ್ಥರ ಜತೆ ಒಪ್ಪಂದ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.
ಬಾಂಗ್ಲಾದೇಶದ ಪ್ರಮುಖ ನಾಯಕರಾದ ಶೇಖ್ ಹಸೀನಾ ಮತ್ತು ಖಲೀದಾ ಜಿಯಾ ಇಬ್ಬರೂ ದೇಶದಿಂದ ಹೊರಗಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಚುನಾವಣೆ ನಡೆಯುವುದು ಮುಹಮ್ಮದ್ ಯೂನಸ್ ಮತ್ತು ಅವರ ತಂಡಕ್ಕೆ ಒಂಚೂರು ಇಷ್ಟವಿಲ್ಲ. ಅವರೆಲ್ಲರು ಚುನಾವಣೆ ಮುಂದೂಡಲು ಸಕಲ ರೀತಿಯಲ್ಲಿಯೂ ಪ್ರಯತ್ನ ಪಡುತ್ತಿದ್ದಾರೆ. ಮತ್ತೊಂದೆಡೆ ಅವರ ಆಪ್ತರು ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದಕ್ಕಾಗಿ ಅವರು ಮೊದಲು ಚುನಾವಣಾ ಸುಧಾರಣೆಗಳು ಮತ್ತು ನಂತರ ಚುನಾವಣೆಗಳನ್ನು ನಡೆಸಲಾಗುವುದು ಎನ್ನುತ್ತಿದ್ದಾರೆ.