ಹೊಸದಿಗಂತ ಬೆಳಗಾವಿ :
ಕಳೆದ ವಾರ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ರಾಮನಗರ ವಡ್ಡರವಾಡಿಯ 60 ವರ್ಷದ ವೃದ್ಧೆ ಹಾಗೂ ಆಕೆಯ 29 ವರ್ಷದ ಪುತ್ರಿ ಮೇಲೆ ಪಕ್ಕದ ಮನೆಯವರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳೆದ ಸೋಮವಾರ ನಡೆದಿರುವ ಈ ಘಟನೆ ಕುರಿತಂತೆ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ವಡ್ಡರವಾಡಿಯ ಇದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮಹಿಳೆ ಮನೆಗೆ ಅಪರಿಚಿತರು ಬಂದು ಹೋಗುತ್ತಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೇವೆ ಎಂದು ಆರೋಪಿಸಿ ಮೂವರೂ ಕೂಡ ನನ್ನನ್ನು ಹಾಗೂ ನನ್ನ ತಾಯಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ತಾಯಿಯ ಸೀರೆ ಹರಿದು ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.