ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದ್ದು, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (89)ಅವರು ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯಕ್ಕೀಡಾಗಿದ್ದ ಭಗವಾನ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯನ್ನು ಭಗವಾನ್ ಅವರು ಎದುರಿಸುತ್ತಿದ್ದರು.
ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಭಗವಾನ್ ಅವರು ಇಹಲೋಕ ತ್ಯಜಿಸಿದ್ದಾರೆ.
ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಅವರು ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಚಂದನದ ಗೊಂಬೆ, ಆಪರೇಷನ್ ಡೈಮಂಡ್ ರಾಕೆಟ್, ಹೊಸ ಬೆಳಕು ಇನ್ನಿತರ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
65 ವರ್ಷಗಳಿಂದ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಜೀವ ಇನ್ನಿಲ್ಲ, ಭಗವಾನ್ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರಿಟ್ಟಿದೆ.