ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಿನ ವಾಕಿಂಗ್‌ಗೆಂದು ಮನೆಯಿಂದ ಹೊರಟಿದ್ದ 70 ವರ್ಷದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರು ಡಿಕ್ಕಿಹೊಡೆದ ಘಟನೆ ದೆಹಲಿಯ ನರೇಲಾ ಪ್ರದೇಶದಲ್ಲಿ ನಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ವೃದ್ಧೆ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ವೇಳೆ ಚಾಲಕ ಮದ್ಯ ಸೇವಿಸಿದ್ದ ಎನ್ನುವ ಆರೋಪವೂ ಕೇಳಿಬಂದಿದ್ದು, ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ವೇಗವಾಗಿ ಬಂದ ಮರ್ಸಿಡಿಸ್ ಕಾರು ಡಿಕ್ಕಿ
ಶನಿವಾರ ಬೆಳಗ್ಗೆ ಮಾಮುರ್ಪುರದ ಹಿಮಾಲಯ ಅಪಾರ್ಟ್‌ಮೆಂಟ್ಸ್ ಬಳಿ ಅಪಘಾತ ಸಂಭವಿಸಿದೆ. ಮರ್ಸಿಡಿಸ್ ಕಾರು ಮತ್ತು ವ್ಯಾಗನರ್ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ವ್ಯಾಗನರ್ ಕಾರು ಹಿಂದಕ್ಕೆ ಚಲಿಸಿ, ಅಲ್ಲೇ ನಿಲ್ಲಿಸಿದ್ದ ತ್ರಿಚಕ್ರ ವಾಹನಕ್ಕೆ ಗುದ್ದಿದೆ.
ಈ ವೇಳೆ ಸಮೀಪದಲ್ಲಿದ್ದ ಊರ್ಮಿಳಾ ಎಂಬ 70 ವರ್ಷದ ಮಹಿಳೆ ಎರಡು ವಾಹನಗಳ ನಡುವೆ ಸಿಲುಕಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ಸೇವನೆ ಆರೋಪ
ಅಪಘಾತದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮರ್ಸಿಡಿಸ್ ಕಾರನ್ನು ಪರಿಶೀಲಿಸಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕ ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಮತ್ತು ಮದ್ಯ ಸೇವಿಸಿದ್ದ ಎನ್ನಲಾಗಿದೆ. ಈ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಚಾಲಕನ ಗುರುತು ಪತ್ತೆ
ಮರ್ಸಿಡಿಸ್ ಕಾರು ಚಲಾಯಿಸುತ್ತಿದ್ದ ಯುವಕನನ್ನು ಶುಭಂ ಎಂದು ಗುರುತಿಸಲಾಗಿದೆ. ಆತ ಹರಿಯಾಣ ಪೊಲೀಸ್ ಇಲಾಖೆಯ ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಳಿಕ ಶುಭಂನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಶುಭಂ ನೀಡಿರುವ ಪ್ರಾಥಮಿಕ ಮಾಹಿತಿಯಂತೆ, ಮರ್ಸಿಡಿಸ್ ಕಾರು ಆತನ ಸ್ನೇಹಿತರಿಗೆ ಸೇರಿದ್ದು, ಪ್ರವಾಸಕ್ಕಾಗಿ ಒಂದು ದಿನದ ಮಟ್ಟಿಗೆ ಕಾರನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.
ವ್ಯಾಗನರ್ ಚಾಲಕನಿಗೂ ಗಾಯ
ಅಪಘಾತದಲ್ಲಿ ವ್ಯಾಗನ್‌ಆರ್ ಕಾರಿನ ಚಾಲಕನಿಗೂ ಗಾಯಗಳಾಗಿವೆ. ಆದರೆ ಗಾಯಗಳು ಗಂಭೀರವಾಗಿಲ್ಲ ಎಂದು ತಿಳಿದುಬಂದಿದ್ದು, ಅವರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಪ್ರಕರಣ ದಾಖಲಿಸಿ ತನಿಖೆ
ಘಟನೆಗೆ ಸಂಬಂಧಿಸಿದಂತೆ ನರೇಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಊರ್ಮಿಳಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ನಿಖರ ಕಾರಣ, ಕಾರಿನ ವೇಗ ಹಾಗೂ ಚಾಲಕ ಮದ್ಯ ಸೇವಿಸಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



