ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಮೂಲಕ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 7ರಂದು ಮಧ್ಯಾಹ್ನ 3.30ಕ್ಕೆ ಲಾರಿಯಿಂದ ಗೋದಾಮಿಗೆ ಪಟಾಕಿ ಇಳಿಸುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಅದೇ ದಿನ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. ತದನಂತರದ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 16ಕ್ಕೆ ಏರಿತ್ತು. ಇದೀಗ ಮಂಗಳವಾರ (ಅಕ್ಟೋಬರ್ 17) ಅಂಗಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತಮಿಳುನಾಡಿನ ವಾಯಂಬಾಡಿ ಮೂಲದ ರಾಜೇಶ್ ಪ್ರಾಣ ಕಳೆದುಕೊಂಡಿದ್ದಾನೆ. ಈವರೆಗೆ ಬಲಿಯಾದವರ ಸಂಖ್ಯೆ 17ಕ್ಕೇರಿದೆ. ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ತಿಬೆಲೆ ಪ್ರಕರಣ ಸಂಬಂಧ ಕಳೆದ ಮಂಗಳವಾರ ಕರ್ನಾಟಕ ಸರ್ಕಾರವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.