Sunday, December 3, 2023

Latest Posts

ಬರದ ಛಾಯೆ: ಕಾಳು ಕಟ್ಟುವ ಮುಂಚೆಯೇ ಶೇಂಗಾಕ್ಕೆ ಕುಂಟೆ ಹೊಡೆದ ಅನ್ನದಾತ

– ಮಂಜುನಾಥ ಹೊಡೇಂ

ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವ, ಹಲವು ಕಡೆ ಬರದ ಸ್ಥಿತಿ ನಿರ್ಮಾಣವಾಗಿದ್ದು ಖೇದಕರ. ಮಳೆ ಬರುವ ಸಂಭವ ನಂಬಿದ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಆದರೆ ನಿರೀಕ್ಷಿತ ಮಳೆ ಬರದ ಕಾರಣ ಶೇಂಗಾ ಕಾಳು ಕಟ್ಟುವ ಮುನ್ನವೇ ಅವುಗಳನ್ನು ರೈತರು ಟ್ರ್ಯಾಕ್ಟರ್‌ನಿಂದ ಕೀಳುವ ಕಾಯಕಕ್ಕೆ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಕಾನ ಹೊಸಹಳ್ಳಿ ಹೋಬಳಿಯ ಎಕ್ಕೆಗುಂದಿ ಗ್ರಾಮದ ರೈತ ಮಹಿಳೆ ಚೆನ್ನವೀರಮ್ಮ 4 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದರು. ಶೇಂಗಾ ಒಣಗುತ್ತಿರುವುದನ್ನು ನೋಡಿ ದನಕರುಗಳಿಗೆ ಹುಲ್ಲು ಸಿಗುತ್ತದೆ ಎಂದು ಟ್ಯಾಕ್ಟರ್ ನಿಂದ ಕುಂಟೆ ಹೊಡಿಸಿ ಬಳ್ಳಿಯನ್ನು ಆರಿಸುತ್ತಿದ್ದಾರೆ.

ಮಳೆ ಇಲ್ಲದ ಕಾರಣ ಶೇಂಗಾ ಬೆಳೆ ಒಣಗಿ ಎಲೆ ಉದುರುತ್ತಿದೆ. ದನಕರುಗಳಿಗೆ ಕನಿಷ್ಟ ಪಕ್ಷ ಬಳ್ಳಿಯಾದರೂ ದೊರಕಿಸುವ ಉದ್ದೇಶದಿಂದ ಶೇಂಗಾ ಹೊಲಗಳಿಗೆ ಕುಂಟೆ ಹೊಡೆಸುವಲ್ಲಿ ರೈತರು ನಿರತರಾಗಿದ್ದಾರೆ. ಪ್ರತಿ ವರ್ಷ ರೈತರು ದೊಡ್ಡ ಗೌರಿ ಹುಣ್ಣಿಮೆ ಹಬ್ಬದ ಸಮಯದಲ್ಲಿ ಶೇಂಗಾ ಕೀಳುತ್ತಿದ್ದರು ಈ ವರ್ಷ ಮಳೆ ಇಲ್ಲದ್ದರಿಂದ ಶೇಂಗಾ, ಮೆಕ್ಕೆಜೋಳ ಜೋಳ, ರಾಗಿ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ.

ಈ ಬಾರಿ ಅನೇಕರು ಸಾಲ ಮಾಡಿ ಬೀಜ, ಗೊಬ್ಬರ ತಂದು ಹೊಲದಲ್ಲಿ ಶೇಂಗಾ ಬಿತ್ತನೆ ಮಾಡಿಸಿದ್ದಾರೆ. ಬೆಳೆಗಾಗಿ ಮಾಡಿದ ಸಾಲ ಮುಂದೆ ಹೇಗೆ ತೀರಿಸಬೇಕೆಂದು ದೊಡ್ಡ ಚಿಂತೆ ಇಲ್ಲಿನ ರೈತರದ್ದಾಗಿದೆ. ಮಳೆಯಿಲ್ಲದ ಕಾರಣ ಜಾನುವಾರುಗಳ ಹೊಟ್ಟೆ ತುಂಬಲಿಯೆಂದು ಶೇಂಗಾ ಕೀಳಲಾಗುತ್ತಿದೆ. ಮೇವು ಇಲ್ಲದೇ ಹೋದರೆ ಜಾನುವಾರುಗಳನ್ನು ಸಾಕುವುದು ಕಷ್ಟವಾಗುತ್ತದೆ. ಆದ್ದರಿಂದ ಕಾಯಿ ಸಿಗದಿದ್ದರೂ ಬೇಡ, ಬಳ್ಳಿಯಾದರೂ ದಕ್ಕಿದರೆ ದನಕರುಗಳು ಬದುಕಿಕೊಳ್ಳುತ್ತವೆ ಎಂದು ರೈತರು ಈ ನಿರ್ಧಾರ ಕೈಗೊಂಡಿದ್ದಾರೆ.

ಕೆಲವರು ಮುಂಚೆ ಶೇಂಗಾ ಬಿತ್ತನೆ ಮಾಡಿದವರು ಕೀಳುತ್ತಿದ್ದಾರೆ. ಕಾಯಿ ಗಟ್ಟಿಯಾಗಿಲ್ಲ. ಮಳೆ ಬಂದಿದ್ದರೆ ಇನ್ನೂ 15 ರಿಂದ 20 ದಿನಗಳಲ್ಲಿ ಬೆಳೆ ತೆಗೆಯಬೇಕಿತ್ತು. ಆದರೆ, ಮಳೆಯಿಲ್ಲದೆ ಬಳ್ಳಿಯು ಸಿಗುವುದಿಲ್ಲವೆಂದು ಮುಂಚಿತವಾಗಿಯೇ ಕೀಳುತ್ತಿದ್ದಾರೆ. ಆದರೆ, ಒಂದು-ಒಂದೂವರೆ ತಿಂಗಳ ಬೆಳೆ ಮಳೆಯಿಲ್ಲದೆ ಹೂವು ಒಣಗಿ ಕಾಯಿ ಕಟ್ಟುತ್ತಿಲ್ಲ ಎಂದು ಕೂಡ್ಲಿಗಿ ಕೃಷಿ ನಿರ್ದೇಶಕ ಎಂ.ಟಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!