September 27, 2026
Sunday, September 27, 2026
spot_img

‘ಜೋರ್ಜ್ ಕುಟ್ಟಿ’ಗೆ ಇನ್ನೊಂದು ಸಂಕಷ್ಟ: ‘ದೃಶ್ಯಂ 3’ನಲ್ಲಿ ನಂಬರ್ ಪ್ಲೇಟ್ ಬಳಕೆ ಆರೋಪಿಸಿ ದೂರು ನೀಡಿದ ರೈತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂನ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಹೊಸ ವಿವಾದಕ್ಕೆ ಸಿಲುಕಿದೆ. ಸಿನಿಮಾದಲ್ಲಿ ಬಳಸಲಾದ ವಾಹನದ ನೋಂದಣಿ ಸಂಖ್ಯೆ ತಮ್ಮ ವೈಯಕ್ತಿಕ ವಾಹನದ್ದಾಗಿದ್ದು, ಅನುಮತಿ ಪಡೆಯದೆ ಬಳಸಲಾಗಿದೆ ಎಂದು ಆರೋಪಿಸಿ ಇಡುಕ್ಕಿ ಜಿಲ್ಲೆಯ ರೈತರೊಬ್ಬರು ದೂರು ನೀಡಿದ್ದಾರೆ.

ಇಡುಕ್ಕಿ ಜಿಲ್ಲೆಯ ಕುಂಚಿತನ್ನಿ ನಿವಾಸಿ ಆರ್.ಡಿ. ರಾಜೀವ್ ಅವರು ಮುನ್ನಾರ್ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ಮಾಪಕ ಆಂಟನಿ ಪೆರುಂಬವೂರ್, ನಿರ್ದೇಶಕ ಜೀತು ಜೋಸೆಫ್ ಹಾಗೂ ಚಿತ್ರದ ನಿರ್ಮಾಣ ತಂಡದ ವಿರುದ್ಧ ಅಧಿಕೃತ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಚಿತ್ರದಲ್ಲಿ ಮೋಹನ್‌ಲಾಲ್ ಅಭಿನಯದ ಜಾರ್ಜ್‌ಕುಟ್ಟಿ ಪಾತ್ರ ಬಳಸುವ ವಾಹನಕ್ಕೆ ಅಳವಡಿಸಿದ ನೋಂದಣಿ ಸಂಖ್ಯೆ ತಮ್ಮ ವೈಯಕ್ತಿಕ ವಾಹನದ ಸಂಖ್ಯೆಯಾಗಿದೆ. ತಮ್ಮ ಅನುಮತಿ ಅಥವಾ ಪೂರ್ವ ಮಾಹಿತಿ ಇಲ್ಲದೆ ಈ ಸಂಖ್ಯೆಯನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:

ರಾಜೀವ್ ಅವರ ಸ್ನೇಹಿತರು ಸಿನಿಮಾ ನೋಡಿದ ಬಳಿಕ ವಾಹನದ ಸಂಖ್ಯೆಯ ಹೊಂದಾಣಿಕೆ ಬಗ್ಗೆ ಮಾಹಿತಿ ನೀಡಿದ್ದು, ನಂತರ ಅವರು ಸ್ವತಃ ಪರಿಶೀಲಿಸಿ ಇದೇ ಸಂಖ್ಯೆ ಬಳಸಿರುವುದನ್ನು ದೃಢಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರರ ಬಳಿ ಮಹೀಂದ್ರಾ ಸ್ಕಾರ್ಪಿಯೊ ವಾಹನ ಇದ್ದು, ಸಿನಿಮಾದಲ್ಲಿ ಇದೇ ನೋಂದಣಿ ಸಂಖ್ಯೆಯನ್ನು ಬೇರೆ ಮಾದರಿಯ ವಾಹನಕ್ಕೆ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಚಿತ್ರದ ನಿರ್ಮಾಣ ತಂಡದಿಂದ ಸ್ಪಷ್ಟನೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Must Read