ಕೇಜ್ರಿವಾಲ್ ಗೆ ಮತ್ತೊಂದು ಹಿನ್ನಡೆ: ಫ್ಯಾಮಿಲಿ ವೈದ್ಯರ ಜೊತೆ ನಿತ್ಯವೂ ಸಮಾಲೋಚನೆ ನಡೆಸಲು ಕೋರ್ಟ್ ನಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಕುಟುಂಬ ವೈದ್ಯರ ಜೊತೆ ನಿತ್ಯವೂ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಲು ಅವಕಾಶ ಕೊಡಬೇಕು ಎಂದು ಕೋರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal)ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕೇಜ್ರಿವಾಲ್ ಅವರಿಗೆ ಅಗತ್ಯ ಇರುವ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ (Kaveri Baweja) ಅವರು ಏಮ್ಸ್ ಆಸ್ಪತ್ರೆಗೆ (AIIMS hospital) ಆದೇಶಿಸಿದ್ದಾರೆ.

ಅದೇ ರೀತಿ ದೆಹಲಿ ಮುಖ್ಯಮಂತ್ರಿಗಳ ಬ್ಲಡ್ ಶುಗರ್ ಮಟ್ಟ ಕಡಿಮೆ ಮಾಡಲು ಇನ್ಸುಲಿನ್ ಅಗತ್ಯ ಇದೆಯಾ ಎಂಬುದು ಅವಲೋಕಿಸಲು ಮತ್ತು ಅವರ ಇತರ ವೈದ್ಯಕೀಯ ಸಮಸ್ಯೆಗಳಿಗೆ ಯಾವ ಚಿಕಿತ್ಸೆ ಕೊಡಬಹುದು ಎಂಬುದನ್ನು ನಿರ್ಧರಿಸಲು ದೆಹಲಿಯ ಏಮ್ಸ್ ಆಸ್ಪತ್ರೆಯು ಒಂದು ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಎಂದು ಜಡ್ಜ್ ತಿಳಿಸಿದ್ದಾರೆ.

ಕೇಜ್ರಿವಾಲ್ ಮದ್ಯ ನೀತಿ ಹಗರಣ ಸಂಬಂಧ ಇಡಿಯಿಂದ ಬಂಧಿತರಾಗಿ ಏಪ್ರಿಲ್ 1ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಇಲ್ಲಿ ಅವರಿಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ಅವರನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂದು ಎಎಪಿ ಪಕ್ಷ ಆರೋಪ ಮಾಡುತ್ತಿದೆ.

ಹೀಗಾಗಿ ವೈದ್ಯರ ಜೊತೆ ನಿತ್ಯವೂ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಲು ಅವಕಾಶ ಕೋರಿದ್ದರು.

ಇತ್ತ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮಾವಿನ ಹಣ್ಣು ತಿಂದು ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಜಾಮೀನು ಪಡೆಯಲು ಅವರು ಮಾಡುತ್ತಿರುವ ತಂತ್ರ ಎಂದು ಕಳೆದ ವಾರ ಕೋರ್ಟ್ ವಿಚಾರಣೆ ವೇಳೆ ಇಡಿ ವಾದಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!