June 26, 2026
Friday, June 26, 2026
spot_img

ಮಮತಾ ಟೀಮ್ ಗೆ ಮತ್ತೊಂದು ಶಾಕ್: ಟಿಎಂಸಿಯ ಎಲ್ಲಾ ಹುದ್ದೆಗಳಿಗೆ ಕಾಕೋಲಿ ಗುಡ್‌ಬೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತೆ ಮುನ್ನೆಲೆಗೆ ಬಂದಿದೆ.

ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಲೋಕಸಭಾ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಇದೀಗ ಪಕ್ಷದ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.

ಸಭೆ ಬಹಿಷ್ಕಾರ ಸೂಚನೆ ಬಳಿಕ ರಾಜೀನಾಮೆ

ಬರಾಸತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಕೋಲಿ ಘೋಷ್ ದಸ್ತಿದಾರ್ ಅವರು ಇತ್ತೀಚೆಗೆ ನಡೆದ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಆ ಸಭೆಗೆ ಹಾಜರಾಗಬಾರದು ಎಂದು ಪಕ್ಷದಿಂದ ಸೂಚನೆ ಬಂದಿತ್ತು ಎನ್ನಲಾಗಿದ್ದು, ಅದರ ಬೆನ್ನಲ್ಲೇ ಅವರು ತಮ್ಮ ಎಲ್ಲಾ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಪ್ರಮುಖ ಹುದ್ದೆಗಳಿಂದ ಹಿಂದೆ ಸರಿತ ನಾಯಕಿ

ಕಾಕೋಲಿ ಘೋಷ್ ದಸ್ತಿದಾರ್ ಅವರು ಟಿಎಂಸಿಯ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಪಕ್ಷದ “ಬಂಗಾ ಜನನಿ” ಕಾರ್ಯಕ್ರಮದ ಪ್ರಮುಖ ಮುಖವಾಗಿಯೂ ಗುರುತಿಸಿಕೊಂಡಿದ್ದರು. ನಾಲ್ಕು ಬಾರಿ ಸಂಸದೆಯಾಗಿರುವ ಅವರು ಪಕ್ಷದ ರಾಜ್ಯಾಧ್ಯಕ್ಷ ಸುಬ್ರತಾ ಬಕ್ಷಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ಸೋಲಿನ ಬಳಿಕ ಟಿಎಂಸಿಯಲ್ಲಿ ಅಸಮಾಧಾನ?

ಇತ್ತೀಚಿನ ಚುನಾವಣಾ ಹಿನ್ನಡೆಯ ಬಳಿಕ ಟಿಎಂಸಿಯಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಕೋಲಿ ಘೋಷ್ ದಸ್ತಿದಾರ್ ಅವರ ರಾಜೀನಾಮೆ ಈ ಒಳಭಿನ್ನತೆಗೆ ಮತ್ತಷ್ಟು ಇಂಧನ ನೀಡಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬೆಳವಣಿಗೆಗಳತ್ತ ಎಲ್ಲರ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !