ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸಂಪುಟದ ಮತ್ತೊಬ್ಬ ಸಚಿವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಸಚಿವ ಬೋಸರಾಜು ವಿರುದ್ಧ ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜಭವನ ಮೆಟ್ಟಿಲೇರಿದ್ದಾರೆ.
ಸಚಿವ ಎನ್.ಎಸ್.ಬೋಸರಾಜು ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಯಚೂರಿನಲ್ಲಿ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕುರಿತಂತೆ ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಅದರ ಪ್ರಕಾರ, ಸಿ.ಎಚ್.ಶ್ರೀನಿವಾಸ್, ಎನ್.ಎಸ್.ಕೃಷ್ಣವೇಣಿ, ಮುತ್ಯಾಲ ತಿರುಮಲ, ವಿ.ಶಿವನಾದ ಅವರು ಆರೋಪಿಗಳಾಗಿದ್ದಾರೆ. ಕೃಷ್ಣವೇಣಿಯವರು ಎನ್.ಎಸ್.ಬೋಸರಾಜು ಅವರ ಪತ್ನಿಯಾಗಿದ್ದು, ಅರಣ್ಯ ಒತ್ತುವರಿಯಲ್ಲಿ ಪ್ರಭಾವ ಬಳಕೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಭೂಮಿ ಒತ್ತುವರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೃಜನಪಕ್ಷಪಾತ ಎಸಗಲಾಗಿದೆ. ಗುಂಪು ರಚನೆ ಮಾಡಿಕೊಂಡು ರಕ್ಷಿತಾರಣ್ಯವನ್ನು ಕಬಳಿಸಿದ್ದಾರೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂ. ದರ ಇದೆ. ಒಟ್ಟು ಭೂಮಿಗೆ ನೂರಾರು ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವಿದೆ. ಕೃಷ್ಣವೇಣಿ ಅವರು 17 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂದು ದೂರಿದ್ದಾರೆ. ಅರಣ್ಯ ಒತ್ತುವರಿ ವಿಚಾರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಎನ್.ಎಸ್.ಬೋಸರಾಜು ಅವರನ್ನು ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಲಾಗಿದೆ.