ಪೂರ್ವ ಲಡಾಖ್‌ನ LAC ಉದ್ದಕ್ಕೂ ಗಸ್ತು ತಿರುಗಲು ಭಾರತ, ಚೀನಾ ಅಸ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾದ ಸಂಧಾನಕಾರರು ಒಪ್ಪಂದಕ್ಕೆ ಬಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಹೇಳಿದ್ದಾರೆ.

16ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಯಾಗಿದೆ. ಗಡಿಯಲ್ಲಿ ಉಭಯ ದೇಶಗಳ ಗಸ್ತು ತಿರುಗುವ ವಿಚಾರವಾಗಿ ಕಳೆದ ಹಲವಾರು ವಾರಗಳಿಂದ ಚರ್ಚೆ ನಡೆಯುತ್ತಿತ್ತು. ಇದರ ಪರಿಣಾಮವಾಗಿ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ವ್ಯವಸ್ಥೆಯ ಒಪ್ಪಂದಕ್ಕೆ ಬರಲಾಗಿದೆ.

ಡೆಪ್ಸಾಂಗ್ ಪ್ಲೇನ್ಸ್ ಮತ್ತು ಡೆಮ್ಚೋಕ್ LAC ಉದ್ದಕ್ಕೂ ಇರುವ ಗಸ್ತು ತಿರುಗುವಿಕೆ ಪುನರಾರಂಭಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಈ ನಡುವೆ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮೋದಿ ಸಂಭಾವ್ಯ ದ್ವಿಪಕ್ಷೀಯ ಸಭೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜೂನ್ 15, 2020 ರಂದು ಗಾಲ್ವಾನ್‌ನಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಇದರ ಪರಿಣಾಮವಾಗಿ ಭಾರತವು ಕರ್ನಲ್ ಸೇರಿದಂತೆ 20 ಸೈನಿಕರನ್ನು ಕಳೆದುಕೊಂಡಿತು. ಚೀನಾ ಕೇವಲ ನಾಲ್ಕು ಸಾವುನೋವುಗಳನ್ನು ಒಪ್ಪಿಕೊಂಡಿದ್ದರೂ, ಘರ್ಷಣೆಯಲ್ಲಿ 40 ​​ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. 1962ರ ಯುದ್ಧದ ನಂತರ ಈ ಘಟನೆ ತೀವ್ರವಾಗಿತ್ತು. ಇದು ಚೀನಾ-ಭಾರತದ ಸಂಬಂಧಗಳಲ್ಲಿ ಬಿರುಕಿಗೆ ಕಾರಣವಾಗಿತ್ತು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!