ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಕ್ಕಟ್ಟಿಗೆ ಸಿಲುಕಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಯಲ್ಲಿ ಶಿವಸೇನೆಯ 66 ಕಾರ್ಪೊರೇಟರ್‌ಗಳು ಏಕನಾಥ್ ಶಿಂಧೆ ಪಾಳಯಕ್ಕೆ ಸೇರಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ, ಎಲ್ಲಾ 66 ಬಂಡಾಯ ಕಾರ್ಪೊರೇಟರ್‌ಗಳು ಬುಧವಾರ ತಡರಾತ್ರಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. 67 ಶಿವಸೇನೆ ಕಾರ್ಪೊರೇಟರ್‌ಗಳ ಪೈಕಿ 66 ಮಂದಿ ಶಿಂಧೆಪಾಳಯಕ್ಕೆ ಸೇರಿಕೊಂಡಿರುವುದರಿಂದ ಉದ್ಧವ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಳ್ಳುವಂತಾಗಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಂತರ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಅತ್ಯಂತ ಪ್ರಮುಖ ನಾಗರಿಕ ಸಂಸ್ಥೆಯಾಗಿದೆ.
ಉದ್ಧವ್ ನಿಷ್ಠಾವಂತರು ಮತ್ತು ಶಿಂಧೆ ಬಣ ಇಬ್ಬರೂ ತಮ್ಮ ತಮ್ಮ ಗುಂಪು ಮೂಲ ಶಿವಸೇನೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದು ಪಕ್ಷದ ‘ಬಿಲ್ಲು ಮತ್ತು ಬಾಣ’ ಚಿಹ್ನೆಯ ಕುರಿತಾಗಿ ಕಿತ್ತಾಡುತ್ತಿದ್ದಾರೆ ಎನ್ನಲಾಗಿದೆ.