ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಅತ್ಯಂತ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಅಂದರೆ ಅದು ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’. ಭಾರತೀಯ ಸಿನಿಮಾರಂಗದ ದಿಗ್ಗಜ ಕಲಾವಿದರು ನಟಿಸುತ್ತಿರುವ ಈ ಅದ್ಧೂರಿ ಚಿತ್ರದ ಕುರಿತು ಈಗ ಮತ್ತೊಂದು ರೋಮಾಂಚನಕಾರಿ ಸುದ್ದಿ ಹೊರಬಿದ್ದಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ನೂತನ ಪೋಸ್ಟರ್ನಲ್ಲಿ ಜಟಾಯುವಿನ ತೀವ್ರವಾದ ದೃಷ್ಟಿ ಮತ್ತು ಬೃಹತ್ ರೆಕ್ಕೆಗಳನ್ನು ಅಗಲಿಸಿ ಹಾರುವ ಭವ್ಯವಾದ ನೋಟ ಅಭಿಮಾನಿಗಳ ಗಮನ ಸೆಳೆಯುತ್ತಿದೆ. “ಗೆಲುವಿಗಾಗಿ ಅಲ್ಲ, ಧರ್ಮ ಮತ್ತು ಸತ್ಯಕ್ಕಾಗಿ ಹೋರಾಡಿದ ಸಾಹಸಿ ಜಟಾಯು” ಎಂಬ ಸಂದೇಶದೊಂದಿಗೆ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಮಾಯಣ ಮಹಾಕಾವ್ಯದಲ್ಲಿ ಸೀತಾದೇವಿಯನ್ನು ರಾವಣ ಅಪಹರಿಸಿಕೊಂಡು ಹೋಗುವಾಗ, ತನಗಿಂತ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಲೆಕ್ಕಿಸದೆ ಕೊನೆ ಕ್ಷಣದವರೆಗೂ ಹೋರಾಡಿದ ಜಟಾಯುವಿನ ತ್ಯಾಗ ಅನನ್ಯವಾದದ್ದು.
ವಿಜಯದಶಮಿಯ ಪವಿತ್ರ ದಿನವಾದ ಅಕ್ಟೋಬರ್ 20 ರಿಂದ ‘ರಾಮಾಯಣ-ಭಾಗ 1’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಅಧಿಕೃತವಾಗಿ ಆರಂಭವಾಗಲಿದೆ. ಈ ಮಹತ್ವದ ಘಳಿಗೆಗೂ ಮುನ್ನವೇ ಜಟಾಯುವಿನ ಪೋಸ್ಟರ್ ಬಿಡುಗಡೆ ಮಾಡಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
ಇದರ ಜೊತೆಗೆ, ರಾಮಾಯಣ ಭಾಗ-೧ ಚಿತ್ರವು ಬರುವ ನವೆಂಬರ್ 5, 2026ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದೆ. ಭಾರತದಲ್ಲಿ ಎರಡು ದಿನ ತಡವಾಗಿ ಬಿಡುಗಡೆಯಾಗಲಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ನಿರ್ಮಾಪಕರು, ವಿದೇಶ ಮತ್ತು ಭಾರತದಲ್ಲಿ ಒಂದೇ ದಿನ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.



