ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಾಲಿ ಚಿತ್ರರಂಗದ ಖ್ಯಾತ ನಿರ್ದೇಶಕ ಅನಿಕ್ ದತ್ತಾ ಅವರ ಅಕಾಲಿಕ ನಿಧನ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ.
ಬುಧವಾರ ಮಧ್ಯಾಹ್ನ ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದ ಟೆರೇಸ್‌ನಿಂದ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾವಿನ ಹಿಂದೆ ನಿಗೂಢತೆ
64 ವರ್ಷದ ಅನಿಕ್ ದತ್ತಾ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಘಟನೆ ಆಕಸ್ಮಿಕವೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸ್ಥಳಕ್ಕೆ ತನಿಖಾ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ:
ಖಿನ್ನತೆಯಿಂದ ಬಳಲುತ್ತಿದ್ರಾ?
ಕುಟುಂಬದ ಆಪ್ತ ಮೂಲಗಳ ಪ್ರಕಾರ, ಅನಿಕ್ ದತ್ತಾ ಕಳೆದ ಕೆಲ ತಿಂಗಳುಗಳಿಂದ ಖಿನ್ನತೆ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರು ಕೋಲ್ಕತ್ತಾದ ತಮ್ಮ ಫ್ಲ್ಯಾಟ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂಬ ಮಾಹಿತಿ ಕೂಡ ಹೊರಬಂದಿದೆ. ಈ ಸಂಗತಿ ಸಾವಿನ ಕುರಿತು ಇನ್ನಷ್ಟು ಕುತೂಹಲ ಹುಟ್ಟಿಸಿದೆ.
‘ಅಪರಾಜಿತೋ’ ಮೂಲಕ ರಾಷ್ಟ್ರ ಮಟ್ಟದ ಖ್ಯಾತಿ
‘ಭೂತೇರ್ ಭವಿಷ್ಯತ್’ ಹಾಗೂ ‘ಅಪರಾಜಿತೋ’ ಸಿನಿಮಾಗಳ ಮೂಲಕ ಅನಿಕ್ ದತ್ತಾ ವಿಶೇಷ ಗುರುತಿಸಿಕೊಂಡಿದ್ದರು. ಸತ್ಯಜಿತ್ ರೇ ಅವರ ಸಿನಿ ಪಯಣಕ್ಕೆ ಗೌರವವಾಗಿ ನಿರ್ಮಿಸಿದ್ದ ‘ಅಪರಾಜಿತೋ’ ಚಿತ್ರ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ಅವರ ನಿಧನಕ್ಕೆ ಸಿನಿ ತಾರೆಯರು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.



