May 25, 2026
Monday, May 25, 2026
spot_img

ಪ್ರಧಾನಿ ಮಾತಿಗೆ ಓಗೊಟ್ಟು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಅಪ್ಪಚ್ಚು ರಂಜನ್‌ ದಂಪತಿ

ಹೊಸದಿಗಂತ ವರದಿ ಮಡಿಕೇರಿ:

ಇಂಧನ ಬಳಕೆಯನ್ನು ಮಿತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಪಂದಿಸಿರುವ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ದಂಪತಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಮೂಲಕ ಗಮನಸೆಳೆದಿದ್ದಾರೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಉಂಟಾಗಿರುವ ತೈಲ ಬಿಕ್ಕಟಿನಿಂದ ದೇಶವನ್ನು ಪಾರು ಮಾಡಲು ಇಂಧನ ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು, ಇದಕ್ಕೆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ನಡುವೆ ಪ್ರಧಾನಿಯವರ ಕರೆಗೆ ಸ್ಪಂದಿಸಿರುವ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೋಮವಾರ ತಮ್ಮ ಸ್ವಂತ ಕಾರನ್ನು ಮನೆಯಲ್ಲೇ ಬಿಟ್ಟು ಮಡಿಕೇರಿಯಿಂದ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಫ್ಲೈ ಬಸ್’ನಲ್ಲಿ ಪ್ರಯಾಣಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ಪತ್ನಿ ಶೈಲಾ ಅವರೂ ಸಾಥ್ ನೀಡಿದ್ದಾರೆ.
ಪ್ರಧಾನಿ ಮೋದಿಯವರು ಇಂಧನ ಮಿತವ್ಯಯಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ನಿರ್ಧರಿಸಿದ್ದೇನೆ ಎಂದು ಅವರು ಮಡಿಕೇರಿ‌ ಬಸ್ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಭಾರತವು ಇಂಧನಕ್ಕಾಗಿ ಪರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಇಂಧನ ದರ ಹೆಚ್ಚಳ ಅನಿವಾರ್ಯ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಧನ ದರ ಕಡಿಮೆ ಇದೆ ಎಂದು ಅವರು ಇದೇ ಸಂದರ್ಭ ನುಡಿದರು. ದೇಶದ ಹಿತದೃಷ್ಟಿಯಿಂದ ಸಾರ್ವಜನಿಕರು ಕೂಡಾ ಇಂಧನ ಮಿತ ಬಳಕೆಗೆ ಮುಂದಾಗಬೇಕು ಎಂದು ಅಪ್ಪಚ್ಚು ರಂಜನ್ ಕರೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !