ಹೊಸದಿಗಂತ ವರದಿ, ಬೇಲೂರು:
ಕಾಡಾನೆ ದಾಳಿಗೆ ಗಾರೆ ಕೆಲಸ ಮಾಡುವ ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕ ಸಾವಿಗೀಡಾಗಿರುವ ಘಟನೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹುಲ್ಲಳ್ಳಿ ಸುರೇಶ್ ಅವರು ತಿಳಿಸಿದರು.
ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ನಡೆದ ಕಾಡಾನೆ ಹಾವಳಿಯಿಂದ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ದೀಪಕ್ ರಾಯ್ ಎಂಬುವವರು ಮೃತ ಪಟ್ಟಿದ್ದು ಮಲೆನಾಡಿನ ಭಾಗವಾದ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿ ಕಾಡಾನೆಯ ಹಾವಳಿಗಳು ಪದೇ ಪದೇ ಆಗುತ್ತಿದ್ದು, ಈ ವಿಷಯದ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದ್ದರು ಕೂಡಾ ಕಾಡಾನೆ ಹಾವಳಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳದೇ ಇರುವುದರಿಂದ ಕ್ಷೇತ್ರದ ಜನತೆ ಭಯದಿಂದ ಓಡಾಡುತ್ತಿದ್ದು, ಭಯ ಭೀತಿಯಿಂದ ಜೀವನವನ್ನು ಸಾಗಿಸುವಂತಾಗಿದೆ.
ಕಾಡಾನೆಯ ಹಾವಳಿಯಿಂದ ಅನೇಕ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ವಿಷಾದನೀಯವಾದ ಸಂಗತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಜನರ ಭೀತಿಯನ್ನು ದೂರ ಮಾಡಲು ಕ್ರಮಕೈಗೊಳ್ಳಬೇಕು. ಮೃತರ ಕುಟುಂಬದವರು ಮೃತ ದೇಹವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು ಸಹಕಾರವನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು ಮತ್ತು ಮೃತರ ಕುಟುಂಬದವರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ನೀಡಲು ಅರಣ್ಯ ಸಚಿವರು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.