ಬಸವಣ್ಣನ ಜನ್ಮಭೂಮಿ ಬಗ್ಗೆ ಯಾವುದೇ ಸರ್ಕಾರಕ್ಕೂ ಕಾಳಜಿ ಇಲ್ಲ: ಸಚಿವ ಶಿವಾನಂದ ಪಾಟೀಲ್

ಹೊಸದಿಗಂತ ವರದಿ,ವಿಜಯಪುರ:

ಬಸವಣ್ಣನ ಜನ್ಮಭೂಮಿ ಬಗ್ಗೆ ಯಾವುದೇ ಸರ್ಕಾರಕ್ಕೂ ಕಾಳಜಿ ಇಲ್ಲ. ನಾವೇ ಶಾಸಕರು, ಸಚಿವರೆ ಗುದ್ದಾಡಿ ಅನುದಾನ ತರಬೇಕಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಚಾರ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಸವೇಶ್ವರರ ಹೆಸರು ಈಗಾಗಲೇ ಪ್ರಚಲಿತದಲ್ಲಿದೆ, ಬಸವಣ್ಣನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದರು.

ಬಸವಣ್ಣ ಜಗತ್ತಿಗೆ ಪ್ರಖ್ಯಾತಿ ಪಡೆದಂತಹವರಾಗಿದ್ದಾರೆ. ಬರಿ ಹೆಸರು ಬದಲಾವಣೆ ಮಾಡುವುದರಿಂದ ಅವರ ಹಿರಿಮೆ, ಅವರ ಗರಿಮೆ ಜಗತ್ತಿಗೆ ಪರಿಚಯಿಸೋದು ಕಷ್ಟ ಎಂದರು.

ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಬೇಕಿದೆ, ಕೂಡಲಸಂಗಮ, ಬಸವ ಜನ್ಮಭೂಮಿಯೂ ಕೂಡ ಅಭಿವೃದ್ಧಿ ಆಗಿಲ್ಲ. ಅದರ ಕಡೆ ಹೆಚ್ಚು ಒತ್ತು ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ನಾನು ಬಸವಣ್ಣನ ಅಭಿಮಾನಿ ಎಂದು ನಾನು ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರೆ ಅದು ಸಾಧನೆ ಅಲ್ಲ. ಯಾರೇ ಮುಖ್ಯಮಂತ್ರಿ ಇರಲಿ ಅಧಿಕಾರ, ಅವಕಾಶ ಇದ್ದಾಗ ಬಸವಣ್ಣನ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಮಾಡಬೇಕು ಎಂದರು.

ಜಗತ್ತಿಗೆ ತೋರಿಸುವ ಕೆಲಸ ಬಸವಣ್ಣನವರ ಜನ್ಮ ಸ್ಥಳದಲ್ಲಿ ಆಗಬೇಕಿದೆ. ಮರು ನಾಮಕರಣ ಈ ಸಂದರ್ಭದಲ್ಲಿ ಮಾಡೋದು, ಬಸವೇಶ್ವರ ಹೆಸರು ಜಿಲ್ಲೆಗೆ ಇಟ್ಟಮೇಲೆ ಹೆಸರು ಹೇಳೋದು ಕಷ್ಟವಾಗುತ್ತೆ ಎಂದರು.

ರಾಜ್ಯಕ್ಕೆ ಬಸವನಾಡು ಎಂದು ಹೆಸರಿಡುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಇದು ಸೂಕ್ತವಾದಂತಹ ವಿಚಾರವೇ ಅಲ್ಲಾ. ಈ ರೀತಿ ರಾಜಕೀಯ ಗಿಮಿಕ್ ಗಾಗಿ ಮಾಡಬಾರದು ಎಂದರು.

ಯಾರನ್ನೇ ಆಗಲಿ ರಾಷ್ಟ್ರೀಯ ಪುರುಷರನ್ನು ರಾಷ್ಟ್ರೀಯ ದೃಷ್ಟಿಕೋನದಿಂದಲೇ ನೋಡಬೇಕು, ಹೊರತಾಗಿ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ನನಗೆ ಇದೊಂದು ರಾಜಕೀಯ ಅಭಾಸ ಎನಿಸುತ್ತಿದೆ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆ ಈ ಮರುನಾಮಕರಣದ ಗಿಮಿಕ್ ಮಾಡಲಾಗಿದೆಯಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಅದು ಹಾಗೆ ಮಾಡಿದ್ದರೆ ಅದು ತಪ್ಪು. ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ ನಾನು ಮಾತ್ರ ಅದನ್ನು ಒಪ್ಪಿಕೊಳ್ಳೋದಿಲ್ಲ ಎಂದರು.

ಬಸವಣ್ಣನವರ ಕರ್ಮಸ್ಥಾನ ಬೀದರ್ ಇದೆ ಎಂದು ನಾಳೆ ಬೀದರ್ ನವರು ಕೇಳಬಹುದು. ಇವೆಲ್ಲ ಒಂದಕ್ಕೊಂದು ಇತಿಹಾಸ ತಿರುಚಲು ನಾವು ಪ್ರಯತ್ನಿಸಬಾರದು. ಇನ್ನು ಇತಿಹಾಸ ಕರೆಕ್ಟ್ ಆಗಿ ನಿರ್ಮಾಣ ಮಾಡುವಂತಹ ದಿಶೆಯಲ್ಲಿ ನಾವು ಕೆಲಸ ಮಾಡಬೇಕು. ಬಸವಣ್ಣನವರ ಕುರುಹು ಉಳಿಯುವಂತಹದ್ದು ಏನಾದರೂ ಮಾಡಿದ್ದರೆ ಅದು ಒಂದು ಹೆಸರು ತರುತ್ತೆ ಎಂದರು.

ಬಸವಣ್ಣನವರ ಪ್ರತ್ಯೇಕ ಪ್ರಾಧಿಕಾರ ರಚನೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಪ್ರತ್ಯೇಕ ಪ್ರಚಾರ ಮಾಡುವುದಾಗಿ ಸಿದ್ದರಾಮಯ್ಯನವರು ಪ್ರಚಾರಕ್ಕೆ ಬಂದಾಗಲೇ ಹೇಳಿದ್ದಾರೆ‌. ನಾವು ಕೂಡ ಒತ್ತಾಯ ಮಾಡ್ತಿದ್ದೇವೆ. ಬರಿ ಘೋಷಣೆ ಮಾಡಿದ್ದರೆ ಆಗಲ್ಲ, ಅನುದಾನ ಕೊಟ್ಟರೆ ಮುಖ್ಯಮಂತ್ರಿಗೆ ಧನ್ಯವಾದ ಹೇಳುವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!