ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ದೈತ್ಯ ಆಪಲ್ ಚೀನಾಗೆ ಬದಲಾಗಿ ತನ್ನ ಉತ್ಪನ್ನಗಳನ್ನು ಬೇರೆಡೆಗೆ ಹೆಚ್ಚಾಗಿ ಉತ್ಪಾದಿಸಲು ಪ್ರಯತ್ನಗಳನ್ನ ನಡೆಸುತ್ತಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಬರೋಬ್ಬರಿ 7 ಬಿಲಿಯನ್ ಡಾಲರ್ ಗೂ ಅದಿಕ ಮೌಲ್ಯದ ಐಫೋನ್‌ಗಳನ್ನು ಉತ್ಪಾದಿಸಿದ್ದು ಭಾರತದಲ್ಲಿನ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ಪೆಗಾಟ್ರಾನ್ ಕಾರ್ಪೊರೇಷನ್ ಮುಂತಾದ ಪಾಲುದಾರರ ಮೂಲಕ ಆಪಲ್ ತನ್ ಒಟ್ಟಾರೆ ಐಫೋನ್‌ಗಳಲ್ಲಿ 7 ಶೇಕಡಾದಷ್ಟು ಐಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸಿದೆ. ಈ ಹಿಂದೆ ಅಂದರೆ 2021ರಲ್ಲಿ ಆಪಲ್ ಒಟ್ಟಾರೆ 1 ಶೇಕಡಾದಷ್ಟು ಐಫೋನ್‌ಅನ್ನು ಭಾರತದಲ್ಲಿ ಉತ್ಪಾದಿಸುತ್ತಿತ್ತು.
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಆಪಲ್ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಚೀನಾದಲ್ಲಿ ಕೋವಿಡ್ ಏರಿಕೆಯಿಂದ ಹಾಗು ಶೂನ್ಯ ಕೋವಿಡ್ ನೀತಿಯಿಂದ ಉತ್ಪಾದನಾ ಕೊರತೆ ಅನುಭವಿಸಿದ ಆಪಲ್ ನ ಅನೇಕ ಪಾಲುದಾರರೂ ಕೂಡ ಚೀನಾವನ್ನು ತೊರೆಯುತ್ತಿದ್ದಾರೆ. ಕಳೆದ ವರ್ಷ ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್‌ನ ಮುಖ್ಯ “ಐಫೋನ್ ಸಿಟಿ” ಸಂಕೀರ್ಣದಲ್ಲಿ ವ್ಯಾಪಕವಾಗಿ ಸಂಕಷ್ಟ ಎದುರಾಗಿ ಆಪಲ್ ಪೂರೈಕೆ ಸರಪಳಿಯ್ಲಲಿಯೂ ವ್ಯತ್ಯಯವಾಗಿತ್ತು, ಹೀಗಾಗಿ ಐಫೋನ್ ಭಾರತದತ್ತ ಮುಖ ಮಾಡಿತ್ತು. ಇಲ್ಲಿ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಿ ಭಾರತವನ್ನು ತನ್ನ ಮುಂದಿನ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಆಪಲ್ ಚಿಂತಿಸಿದ್ದು ಈ ನಿಟ್ಟಿನಲ್ಲಿ ವೇಗದ ಬೆಳವಣಿಗೆ ದಾಖಲಾಗಿದೆ.