ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂದು ಬಿಡಗಡೆ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಭೌತಿಕ ಅರ್ಜಿ ಸಲ್ಲಿಕೆಯ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ನಮೂನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರವಿದೆ.
ಅರ್ಜಿಯಲ್ಲಿ ಮೊದಲಿಗೆ ಹೆಸರು, ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿ, ಉದ್ಯೋಗ, ಪತಿಯ ಹೆಸರು, ಪತಿಯ ಆಧಾರ್ ಹಾಗೂ ವೋಟರ್ ಐಡಿ ಮುಂತಾದ ಮಾಹಿತಿಯನ್ನು ಕೇಳಲಾಗಿದೆ. ಅದರೊಂದಿಗೆ ಜಾತಿ, ಆಧಾರ್ ಜತೆ ಲಿಂಕ್ ಆಗಿರುವ ಮೊಬೈಲ್ ನಂ. ಬ್ಯಾಂಕ್ ಖಾತೆ ಮಾಹಿತಿಯನ್ನು ನಮೂದಿಸಲು ಜಾಗ ನೀಡಲಾಗಿದೆ.
ಈ ಅರ್ಜಿಯನ್ನು ತುಂಬಿ ಜೊತೆಗೆ, ಮನೆ ಯಜಮಾನಿ ಹಾಗೂ ಆಕೆಯ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ವೋಟರ್ ಐಡಿ ಪ್ರತಿಯನ್ನು ಲಗತ್ತಿಸಬೇಕು. ಅದರೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಲಗತ್ತಿಸಬೇಕು.
ಇದೇ ಮಾಹಿತಿಯನ್ನು ಆನ್ಲೈನ್ ಮೂಲಕ ಸಲ್ಲಿಸಿಯೂ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಜೂ.15ರಂದು ಲಾಂಚ್ ಆಗಲಿದೆ.