Sunday, July 3, 2022

Latest Posts

ಸೈನಿಕ ಶಾಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮೀಸಲಾತಿ ನಿಗದಿಗೆ ಆಗ್ರಹ

ಹೊಸದಿಗಂತ ವರದಿ, ಮಡಿಕೇರಿ
ಭಾರತೀಯ ಸೇನೆಗೆ ಸಾವಿರಾರು ಸೈನಿಕರನ್ನು ನೋಡಿರುವ ಕೊಡಗಿನಲ್ಲಿರುವ ‘ಕೂಡಿಗೆ ಸೈನಿಕ ಶಾಲೆ’ಯಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸಲು ‘ಮೀಸಲಾತಿ’ಯನ್ನು ನಿಗದಿಪಡಿಸಬೇಕು ಮತ್ತು ಶಾಲೆಯಲ್ಲಿನ ಕನಿಷ್ಟ ‘ಡಿ’ ಗ್ರೂಪ್ ಹುದ್ದೆಗಳನ್ನಾದರೂ ಜಿಲ್ಲೆಯವರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಮುಖರು ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸೈನಿಕ ಶಾಲೆ ನಿರ್ಮಾಣಕ್ಕೆ ತಾವು ಕಾರಣವೆಂದು ಹೇಳಿಕೊಳ್ಳುವ ಶಾಸಕ ಅಪ್ಪಚ್ಚು ರಂಜನ್ ಅವರು ಸಹ ಸೈನಿಕ ಶಾಲೆಯಲ್ಲಿ ಜಿಲ್ಲೆಯ ಮಕ್ಕಳ ಓದಿಗೆ ಹೆಚ್ಚಿನ ಅವಕಾಶ ಒದಗಿಸಲು ಮತ್ತು ಅಲ್ಲಿನ ಹುದ್ದೆಗಳ ಭರ್ತಿಯ ಸಂದರ್ಭ ಜಿಲ್ಲೆಯವರಿಗೆ ಹೆಚ್ಚಿನ ಆಧ್ಯತೆ ನಿಡುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲವೆಂದು ಟೀಕಿಸಿದರು.
2006-07 ರ ಸುಮಾರಿಗೆ ಕೂಡಿಗೆಯಲ್ಲಿ ಸೈನಿಕ ಶಾಲೆ ನಿರ್ಮಾಣವಾಗುವುದಕ್ಕೆ ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್‍ನ ಸಿ.ಎಸ್. ಅರುಣ್ ಮಾಚಯ್ಯ ಅವರು ಪ್ರಮುಖ ಕಾರಣ. ಅಂದಿನ ದಿನಗಳಲ್ಲೇ ಶಾಲೆಯ ಆರಂಭಕ್ಕೆ 3 ಕೋಟಿ ಅನುದಾನವನ್ನು ಅವರು ಒದಗಿಸಲು ಯಶಸ್ವಿಯಾಗಿದ್ದರೆಂದು ತಿಳಿಸಿದ ಚಂದ್ರಕಲಾ, ನಮ್ಮಿಂದಲೇ ಸೈನಿಕ ಶಾಲೆ ಬಂತೆನ್ನುವ ಸೈಳೀಯ ಶಾಸಕರ ಪ್ರಯತ್ನಗಳು ಆ ಸಂದರ್ಭ ಇತ್ತೇ ಎನ್ನುವ ಬಗ್ಗೆ ತಮಗೆ ತಿಳಿದಿಲ್ಲವೆಂದು ಕುಟುಕಿದರು.
ಕೂಡಿಗೆ ಸೈನಿಕ ಶಾಲೆಯ ನಿರ್ಮಾಣಕ್ಕೆ ಆರಂಭಿಕ ಹಂತದಲ್ಲಿ 100 ಎಕರೆ ಭೂಮಿಯನ್ನು ಒದಗಿಸಲು ಅಂದಿನ ಕಾಂಗ್ರೆಸ್ ಪ್ರಮುಖರು ಶ್ರಮಿಸಿದ್ದರು. ಆನಂತರ ಹೆಚ್ಚುವರಿ 50 ಎಕರೆ ಬೇಡಿಕೆ ಇತ್ತಾದರೂ, ಅದು ಮಂಜೂರಾಗಿಲ್ಲವೆಂದು ತಿಳಿಸಿದ ಚಂದ್ರಕಲಾ, ಇಷ್ಟೆಲ್ಲ ಪರಿಶ್ರಮದಿಂದ ರೂಪುಗೊಂಡ ಸೈನಿಕ ಶಾಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಅವಕಾಶವೇ ದೊರಕುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಮೂಲಕ ಕೇಂದ್ರಕ್ಕೆ ಕೂಡಿಗೆ ಸೈನಿಕ ಶಾಲೆಯಲ್ಲಿ ಶೇ.25 ರಷ್ಟು ಸ್ಥಾನಗಳನ್ನು ಜಿಲ್ಲೆಯ ಮಕ್ಕಳಿಗೆ ಮೀಸಲಿಡುವಂತೆ ಆಗ್ರಹಿಸಲಾಗಿತ್ತಾದರೂ ಅದು ಫಲಪ್ರದವಾಗಲಿಲ್ಲವೆಂದು ತಿಳಿಸಿದರಲ್ಲದೆ, ಸೈನಿಕ ಶಾಲೆಯ ಮುಖ್ಯಸ್ಥರ ಧೋರಣೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ನೇಮಕಾತಿಯಲ್ಲಿ ಅನ್ಯಾಯ: ಪ್ರಸ್ತುತ ಸೈನಿಕ ಶಾಲೆಯ ನಾಲ್ಕು ಡಿ ಗ್ರೂಪ್ ನೌಕರರ ಭರ್ತಿಗೆ ಆನ್ ಲೈನ್ ಅರ್ಜಿಗಳನ್ನು ಕರೆಯಲಾಗಿದೆ. ಈ ಹುದ್ದೆಯ ಭರ್ತಿಗೆ ವಯಸ್ಸಿನ ಮಿತಿಯನ್ನು 35 ರಿಂದ 50 ವರ್ಷವೆಂದು ಪರಿಗಣಿಸಲಾಗಿದ್ದು, ಅಭ್ಯರ್ಥಿಗಳಿಗೆ 7 ಕೆ.ಜಿ. ಭಾರ ಹೊತ್ತು 1.6 ಕಿ.ಮೀ. ಓಡುವ ಪರೀಕ್ಷೆ ನಿಗದಿಪಡಿಸಲಾಗಿದೆ. ಈ ವಯಸ್ಸಿನ ಮಿತಿಯಲ್ಲಿ ಈ ಪರೀಕ್ಷೆ ಎದುರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಚಂದ್ರಕಲಾ, ಇದರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡಬೇಕು, ಕಂಪ್ಯೂಟರ್ ಡಾಟಾ ಎಂಟ್ರಿ ತಿಳಿದಿರಬೇಕು ಎನ್ನುವ ನಿಬಂಧನೆಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಈ ಹುದ್ದೆಗೆ ರಾಷ್ಟ್ರದ ವಿವಿಧೆಡೆಗಳಿಂದ ಅರ್ಜಿಗಳು ಬಂದಿವೆ. ಈ ಹುದ್ದೆಯನ್ನು ಸ್ಥಳೀಯರಿಗೆ ಕೊಡಲು ಸಾಧ್ಯವಿಲ್ಲವೆ, ಇಂತಹ ವಿಚಾರಗಳ ಬಗ್ಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಏತಕ್ಕೆ ಪ್ರಶ್ನಿಸುತ್ತಿಲ್ಲವೆಂದು ಕಟುವಾಗಿ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಫಿಲೋಮಿನಾ, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss