Friday, September 29, 2023

Latest Posts

ಕೊಡಗಿನ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಅನುಮೋದನೆ: ಸಂಸದ ಪ್ರತಾಪ್ ಸಿಂಹ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ 62 ಕಡೆಗಳಲ್ಲಿ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದೇ ನವೆಂಬರ್ ಮೊದಲ ವಾರದಲ್ಲಿ ಚಾಲನೆಗೊಳ್ಳಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳವಸಭೆಯಲ್ಲಿ ಜಾಗ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.

ಈಗಾಗಲೇ ಕಂದಾಯ ಇಲಾಖೆಯಿಂದ 6 ಕಡೆಗಳಲ್ಲಿ ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆ ಭೂಮಿ ಕಾಯ್ದಿರಿಸಿದ್ದು, ಆ ನಿಟ್ಟಿನಲ್ಲಿ ಟವರ್ ನಿರ್ಮಾಣ ಮಾಡಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಂಸದರು ಹೇಳಿದರು.

ಜಿಲ್ಲೆಯ 6 ಕಡೆಗಳಲ್ಲಿ ಮಾತ್ರ ಅರಣ್ಯ ಹಾಗೂ ಅರಣ್ಯ ಪೈಸಾರಿ ಜಾಗದಲ್ಲಿ ಅರಣ್ಯ ಇಲಾಖೆಯವರು ಜಾಗ ಕಾಯ್ದಿರಿಸುವ ಸಂಬಂಧ ಮಾಹಿತಿ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ‘ಕೊಡಗು ಜಿಲ್ಲೆಯ ಜನತೆಯ ಬಹು ದಿನದ ಬೇಡಿಕೆ ಈಗ ಈಡೇರುತ್ತಿದೆ ಎಂದು ಸಂಸದರು ತಿಳಿಸಿದರು.

ಈ 62 ಸ್ಥಳಗಳ ಜೊತೆಗೆ ಉಳಿದಂತೆ ಪೆರಾಜೆ, ಚೆಂಬು, ಮೇಲ್‍ಚೆಂಬು, ಒಣಚಲು, ವಿ.ಬಾಡಗ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಟವರ್ ಅಳವಡಿಕೆಗೆ ಬೇಡಿಕೆ ಇದ್ದು, ಅದನ್ನು ಸಹ ಪ್ರಸ್ತಾವನೆ ಪಡೆದು ಇನ್ನೂ ಹೆಚ್ಚಿನ ಟವರ್ ನಿರ್ಮಾಣ ಮಾಡಲಾಗುವುದು ಎಂದು ಸಂಸದರು ಹೇಳಿದರು.

‘ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ರಸ್ತೆ, ವಿದ್ಯುತ್, ಅಂತರ್ಜಾಲ ಸಂಪರ್ಕಕ್ಕೆ ಮನವಿ ಮಾಡುತ್ತಾರೆ. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ದೂರ ಸಂಪರ್ಕ ಸಚಿವರಲ್ಲಿ ಮನವಿ ಮಾಡಿದಾಗ ಕೊಡಗು ಜಿಲ್ಲೆಯ 62 ಸ್ಥಳಗಳಲ್ಲಿ ಬಿಎಸ್‍ಎನ್‍ಎಲ್ ಟವರ್ ಅಳವಡಿಕೆಗೆ ಅವಕಾಶ ನೀಡಿದ್ದಾರೆ.. ಇದರಿಂದ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಸಾಧ್ಯವಾದಷ್ಟು ಅಂತರ್ಜಾಲ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಸಂಸದರು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಸಂಚಾರ ನಿಗಮಗದ ಎಂಜಿನಿಯರ್ ಪೊನ್ನುರಾಜು ಅವರು ಜಿಲ್ಲೆಯ 103 ಗ್ರಾ.ಪಂ.ವ್ಯಾಪ್ತಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ. ಉಳಿದಂತೆ ಹಲವು ಕಡೆಗಳಲ್ಲಿ 2ಜಿ ಮತ್ತು 3ಜಿ ಒಳಗೊಂಡ ಬಿಎಸ್‍ಎನ್‍ಎಲ್ ಟವರ್ ಇದೆ. ಜೊತೆಗೆ 4ಜಿ ಆಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ವಿದ್ಯುತ್ ವ್ಯತ್ಯಯ ಆಗಾಗ ಉಂಟಾಗುತ್ತಿದ್ದು, ಆದಷ್ಟು ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಬಿಎಸ್‍ಎಲ್‍ಎನ್ ಸಂಸ್ಥೆಯವರು ಸಾಧ್ಯವಾದಷ್ಟು ಹೆಚ್ಚಿನ ಬ್ಯಾಟರಿ ದಾಸ್ತಾನು ಮಾಡಿಕೊಳ್ಳುವಂತೆ ಸಂಸದರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ಆದರೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದನ್ನು ರೀ ಸ್ಟೋರ್ ಮಾಡಲು ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಹ ಅತೀ ಮುಖ್ಯವಾಗಿದೆ. ವಿದ್ಯುತ್ ಮಾರ್ಗ ಸರಿಪಡಿಸುವ ಸಂದರ್ಭದಲ್ಲಿ ನೆಟ್‍ವರ್ಕ್ ಇಲ್ಲದೆ ನಾವು ಸಹ ಪರಿತಪಿಸುವಂತಾಗುತ್ತದೆ ಎಂದು ಮಾಹಿತಿ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 3 ಟವರ್’ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇದ್ದು, ಇದನ್ನು ಪರಿಶೀಲಿಸಿ ವರದಿ ನೀಡಲಾಗುವುದು ಎಂದರು.

ಈ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು, ಉಳಿದ 3 ಅರಣ್ಯ ಪೈಸಾರಿ ಜಾಗವೆಂದು ದಾಖಲಾಗಿದ್ದು, ಈ ಬಗ್ಗೆ ಅಭಿಪ್ರಾಯ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಪ್ರತೀ ಗಂಟೆಗೆ 32 ರಿಂದ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸಿರುವುದು ವರದಿಯಾಗಿದೆ. ಮಳೆಗಾಲದ ಅವಧಿಯಲ್ಲಿ 3-4 ತಿಂಗಳ ಮಟ್ಟಿಗಾದರೂ ಹೆಚ್ಚಿನ ಸಿಬ್ಬಂದಿಯನ್ನು ಸೆಸ್ಕ್ ವಿಭಾಗಕ್ಕೆ ಒದಗಿಸಬೇಕಿದೆ ಎಂದು ಹೇಳಿದರು.

ತಾ.ಪಂ. ಇಒಗಳಾದ ಶೇಖರ್, ಜಯಣ್ಣ, ಅಪ್ಪಣ್ಣ, ಇತರರು ಟವರ್ ಅಳವಡಿಸುವ ಸಂಬಂಧ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!