ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:
ಓದು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನದಿಗೆ ಹಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.
ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆ ನಿವಾಸಿ ವಿಂಧ್ಯಶ್ರೀ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಗೌರಿಬಿದನೂರು ನಗರದ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಸಹ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ತಡರಾತ್ರಿ ಆಟವಾಡುತ್ತಿದ್ದ ಮಗಳಿಗೆ ಓದುವಂತೆ ತಾಯಿ ಬುದ್ಧಿವಾದ ಹೇಳಿದ್ದು, ಇಲ್ಲವಾದರೆ ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದರು. ಇದೇ ಮಾತನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ವಿಂಧ್ಯಶ್ರೀ ಸೀದಾ ಮನೆಯಿಂದ ಹೊರ ಹೋಗಿ ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಉತ್ತರಪಿನಾಕಿನ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಂತರ ಗಾಬರಿಗೊಂಡ ಪೋಷಕರು ತಡರಾತ್ರಿ ಮಗಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ ಆಕೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.