Wednesday, February 28, 2024

ಅರಸೀಕಟ್ಟೆಯಮ್ಮ ದೇವಸ್ಥಾನ ಅಭಿವೃದ್ಧಿ ವಿಚಾರದಲ್ಲಿ ಮಾಜಿ-ಹಾಲಿ ಶಾಸಕರ ಜಟಾಪಟಿ!

ಹೊಸ ದಿಗಂತ ವರದಿ, ಅರಕಲಗೂಡು:

ತಾಲೂಕು ಮುದ್ದನಹಳ್ಳಿ ಗ್ರಾಮದ ಅರಸೀಕಟ್ಟೆಯಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ಆರೋಪದ ವಿಚಾರ ಮಾಜಿ ಮತ್ತು ಹಾಲಿ ಶಾಸಕರಿಬ್ಬರ ಜಟಾಪಟಿಗೆ ವೇದಿಕೆಯಾಗಿದೆ.

ಗ್ರಾಮದ ಸರ್ವೆ ನಂಬರ್ 14 ರಲ್ಲಿ ಸುಮಾರು 15.12 ಎಕರೆ ಸರ್ಕಾರಿ ಜಮೀನಿದ್ದು ಅದೇ ಸ್ಥಳದಲ್ಲಿ ಅರಸೀಕಟ್ಟೆಯಮ್ಮ ದೇವಸ್ಥಾನವಿದೆ. ಸರ್ಕಾರಿ ಜಾಗದಲ್ಲಿರುವ ಈ ದೇವಸ್ಥಾನದ ನಿರ್ವಹಣೆ ಮಾಡುವಲ್ಲಿ ತಾಲೂಕು ಆಡಳಿತ ಸೋತಿದೆ ಎಂಬ ಕಾರಣ ನೀಡಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅಲ್ಲಿನ ಸ್ಥಳೀಯರು ಕೆಲವು ವರ್ಷಗಳ ಹಿಂದೆ ಸಮಿತಿ ರಚಿಸಿಕೊಂಡು ದೇವಸ್ಥಾನದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ದೇವಸ್ಥಾನದ ಪಕ್ಕದ 2.30 ಎಕರೆ ಸರ್ಕಾರಿ ಕೆರೆ ಜಾಗವನ್ನು ಎಟಿಆರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವುದು ಶಾಸಕ ಎ.ಮಂಜು ಅವರ ಆರೋಪವಾಗಿದೆ.

ಇದಕ್ಕೆ ಸಂಬಂಧಿಸಿ ಎ.ಮಂಜು ಅವರು ಕೊಣನೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸರ್ಕಾರಿ ಅಧಿಕಾರಿಗಳ ಮೇಲೆಯೂ ಹಲವು ಅನುಮಾನಗಳಿರುವ ಬಗ್ಗೆ ತಮ್ಮ ದೂರಿನಲ್ಲಿ ನಮೂದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಾಲೂಕು ಕಚೇರಿ ಎದುರು ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಕೆಲವು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದ್ದು, ದೇವಸ್ಥಾನದ ಅಭಿವೃದ್ಧಿ ಸಹಿಸದೇ ಕೆಲವರು ದುರುದ್ದೇಶದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಎ.ಮಂಜು ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ದೇವಸ್ಥಾನ ಸಮಿತಿ ಹೆಸರಲ್ಲಿ ದೇವಸ್ಥಾನ ಪಕ್ಕದ ಸುಮಾರು 30 ಗುಂಟೆ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಹಿಂದೆ ತಹಶೀಲ್ದಾರ್, ರಾಜಸ್ವ ನಿರೀಕ್ಷಕ ಸೇರಿ ಹಲವರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿರುವ ಎ.ಮಂಜು ಅವರು ಕೊಣನೂರು ಠಾಣೆಗೆ ಗುರುವಾರ ಖುದ್ದು ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡಿರುವ ಎ.ಟಿ.ರಾಮಸ್ವಾಮಿ ಅವರು ಮರುದಿನ ಪ್ರತಿಭಟನೆ ನಡೆಸಿದ ಸಂದರ್ಭ, ಪಾಳುಬಿದ್ದ ದೇವಸ್ಥಾನದ ಅಭಿವೃದ್ಧಿ ಮಾಡಿರುವ ಜತೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಅನುಕೂಲ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಮಾರಾಟಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟಿದ್ದನ್ನು ಸಹಿಸದೇ ದೇವಸ್ಥಾನ ಸಮಿತಿ ರದ್ದುಗೊಳಿಸಲು ಹಿಂದಿನಿಂದಲೂ ಪ್ರಯತ್ನ ನಡೆಯುತ್ತಿದೆ ಎಂದು ಎ.ಮಂಜು ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.

ಈ ನಡುವೆ ಇಬ್ಬರು ರಾಜಕೀಯ ನಾಯಕರ ಕಿತ್ತಾಟದಲ್ಲಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರುವ ಲಕ್ಷಗಳನ್ನು ಬಲ್ಲ ಸ್ಥಳೀಯರೂ ಗೊಂದಲಕ್ಕೆ ಒಳಗಾದಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!