ಶೀಘ್ರದಲ್ಲೇ ರಬಕವಿ-ಬನಹಟ್ಟಿಯಲ್ಲಿ ವೃಕ್ಷೋದ್ಯಾನ

– ಮಲ್ಲಿಕಾರ್ಜುನ ತುಂಗಳ

ಜಮಖಂಡಿಯ ಪ್ರಾದೇಶಿಕ ಅರಣ್ಯ ಇಲಾಖೆಯ ಆಶ್ರಯದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಡೆಂಪೋ ಡೈರಿಯ ಮುಂಭಾಗದಲ್ಲಿರುವ 42 ಎಕರೆ ಭೂ ಪ್ರದೇಶದಲ್ಲಿ ಸಾರ್ವಜನಿಕರ ಮತ್ತು ಮಕ್ಕಳ ಅನುಕೂಲಕ್ಕಾಗಿ ಶೀಘ್ರದಲ್ಲೇ ವೃಕ್ಷೋದ್ಯಾನ ನಿರ್ಮಾಣವಾಗಲಿದೆ.

ಕಳೆದ ತಿಂಗಳು ಚಾಲನೆ ನೀಡಲಾಗಿರುವ ವೃಕ್ಷೋದ್ಯಾನಕ್ಕೆ 2 ಕೋಟಿ ಹಣ ಈಗಾಗಲೇ ಬಿಡುಗಡೆ ಆಗಿದ್ದು, ಈಗ 25 ಲಕ್ಷ ರೂ. ವೆಚ್ಚದ ಮೊದಲ ಹಂತದ ಕಾಮಗಾರಿ ಭರದಿಂದ ನಡೆದಿರುವುದು ತಾಲೂಕಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ.
ಈ ಮೊದಲು ಇಲ್ಲಿ ಬಿಸಿಲು ನೋಡಲಾಗುತ್ತಿರಲಿಲ್ಲ, ಈಗ ಇಲ್ಲಿ ಗಿಡಗಳನ್ನು ನೆಡುತ್ತಿರುವುದರಿಂದ ತಂಪು ಗಾಳಿ ಬೀಸುವ ಮತ್ತು ಅನುಭವಿಸುವ ಅವಕಾಶ ಇಲ್ಲಿನ ಜನರಿಗೆ ದೊರಕಲಿದೆ. ಅದರಂತೆ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಜಾಗೆಯಲ್ಲಿ ಮೊದಲ ಹಂತದಲ್ಲಿ 2600ಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಇಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಮಕ್ಕಳು ಆಡುವ ಸಲಕರಣೆಗಳು ಜೊತೆಗೆ ಇಲ್ಲಿ ಇರುವ ಬಾಂದಾರವನ್ನು ಅಭಿವೃದ್ಧಿಗೊಳಿಸಿ ಅಲ್ಲಿ ದೋಣಿ ವಿಹಾರಕ್ಕೂ ಅವಕಾಶವನ್ನು ನೀಡುವ ಯೋಜನೆ ಕೂಡ ಅತಿ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತಿದೆ.

ಹನಿ ನೀರಾವರಿ:

ಇಲ್ಲಿ ನೆಟ್ಟ ಗಿಡಗಳಿಗೆ ಹನಿ ನೀರಾವರಿಯ ಮೂಲಕ ನೀರು ನೀಡುವ ಸೌಕರ್ಯವನ್ನು ಕೂಡ ಮಾಡುವ ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಈ ವೃಕ್ಷೋದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು. ಅದೇ ರೀತಿಯಾಗಿ ಬನಹಟ್ಟಿಯ ಕೆಎಚ್ಡಿಸಿ ರಸ್ತೆಯಲ್ಲಿರುವ ನಾಲ್ಕು ಅರಣ್ಯ ಪ್ರದೇಶದ ಭೂಮಿಯಲ್ಲಿಯೂ ಕೂಡ ಅರಣ್ಯೀಕರಣಗೊಳಿಸಿ ಅಲ್ಲಿಯೂ ಮಕ್ಕಳಿಗೆ ಅನುಕೂಲವಾಗುವು ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ ಕೂಡ ಇದರಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

“ಗಿಡ ಮರಗಳನ್ನು ರಕ್ಷಿಸುವುದರ ಜೊತೆಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿವೆ. ಮುಂದಿನ ಪೀಳಿಗೆಯ ಅರೋಗ್ಯದ ಹಿತದೃಷ್ಟಿಯಿಂದು ನಾವೆಲ್ಲರು ಗಿಡಮರಗಳನ್ನು ಬೆಳೆಸುವ ಅಗತ್ಯವಿದೆ.”
ಸಿದ್ದು ಸವದಿ, ಶಾಸಕ

“ಈ ಪ್ರದೇಶದಲ್ಲಿ ಈಗಾಗಲೇ 10 ಸಾವಿರಕ್ಕೂ ಅಕ ಬೇವಿನ ಮರಗಳನ್ನು ನೆಟ್ಟಿದ್ದು, ಅವೆಲ್ಲ ಈಗ ಆಳೆತ್ತರಕ್ಕೆ ಬೆಳೆದು ನಿಂತಿವೆ. ಸಾರ್ವಜನಿಕರು ಈ ಜಾಗೆಯನ್ನು ಒತ್ತುವರಿ ಮಾಡಬಾರದು ಮತ್ತು ಅರಣ್ಯದಲ್ಲಿರುವ ಗಿಡಮರಗಳಿಗೆ ಹಾನಿ ಮಾಡಬಾರದು.”
ವಾಸಿಂ ತೇನಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಮಖಂಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!