October 7, 2026
Wednesday, October 7, 2026
spot_img

FASHION | ವಾರ್ಡ್‌ರೋಬ್ ತುಂಬಾ ಬಟ್ಟೆಗಳಿದ್ದರೂ ಏನು ಧರಿಸಬೇಕೆಂದು ಗೊಂದಲವೇ? ಇಲ್ಲಿದೆ ‘ಕ್ಯಾಪ್ಸುಲ್ ವಾರ್ಡ್‌ರೋಬ್’ ರಹಸ್ಯ!

ಫ್ಯಾಷನ್ ಎಂದರೆ ಯಾವಾಗಲೂ ದುಬಾರಿ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುವುದಲ್ಲ. ಲಭ್ಯವಿರುವ ಬಟ್ಟೆಗಳನ್ನು ಹೇಗೆ ಸ್ಮಾರ್ಟ್ ಆಗಿ ಸ್ಟೈಲ್ ಮಾಡುತ್ತೇವೆ ಮತ್ತು ನಮ್ಮನ್ನು ನಾವು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದರ ಮೇಲೆ ಫ್ಯಾಷನ್ ನಿರ್ಧಾರವಾಗುತ್ತದೆ. ಕಡಿಮೆ ಬಜೆಟ್‌ನಲ್ಲಿಯೇ ಅತ್ಯಂತ ಸ್ಟೈಲಿಶ್ ಮತ್ತು ಪ್ರಿಮಿಯಂ ಆಗಿ ಕಾಣಲು ಹಾಗೂ ಬಟ್ಟೆ ಖರೀದಿಸುವಾಗ ಹಣ ಉಳಿಸಲು ಕೆಲವು ಸೂಪರ್ ಫ್ಯಾಷನ್ ಟಿಪ್ಸ್ ಮತ್ತು ಸ್ಮಾರ್ಟ್ ಶಾಪಿಂಗ್ ಐಡಿಯಾಗಳು ಇಲ್ಲಿವೆ.

ವಾರ್ಡ್‌ರೋಬ್ ಕ್ಯಾಪ್ಸುಲ್ ರಚಿಸಿ
ಕ್ಯಾಪ್ಸುಲ್ ವಾರ್ಡ್‌ರೋಬ್ ಎಂದರೆ ಎಂದಿಗೂ ಫ್ಯಾಷನ್‌ನಿಂದ ಹೊರಹೋಗದ ಕೆಲವು ಬೇಸಿಕ್ ಉಡುಪುಗಳನ್ನು ಹೊಂದುವುದು. ಇವುಗಳನ್ನು ವಿವಿಧ ಬಟ್ಟೆಗಳೊಂದಿಗೆ ಸುಲಭವಾಗಿ ಮ್ಯಾಚ್ ಮಾಡಬಹುದು. ಹಾಗಾಗಿ ನಿಮ್ಮ ವಾರ್ಡ್‌ರೋಬ್‌ನಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಪ್ಲೇನ್ ಟಿ-ಶರ್ಟ್‌ಗಳು, ಚೆನ್ನಾಗಿ ಫಿಟ್ ಆಗುವ ಜೀನ್ಸ್ ಮತ್ತು ಒಂದು ಸಾಂಪ್ರದಾಯಿಕ ಬ್ಲ್ಯಾಕ್ ಕುರ್ತಿ ಸದಾ ಇರಲಬೇಕು. ಈ ಬೇಸಿಕ್ ಬಟ್ಟೆಗಳನ್ನು ನೀವು ಬೇರೆ ಯಾವುದೇ ಡಾರ್ಕ್ ಅಥವಾ ವೈಬ್ರೆಂಟ್ ಬಣ್ಣಗಳ ಉಡುಪುಗಳೊಂದಿಗೆ ಸುಲಭವಾಗಿ ಮ್ಯಾಚ್ ಮಾಡಿ ಪ್ರತಿದಿನ ಹೊಸ ಲುಕ್ ಪಡೆಯಬಹುದು.

ಮಿಕ್ಸ್ ಅಂಡ್ ಮ್ಯಾಚ್ ಫಾರ್ಮುಲಾ ಬಳಸಿ
ಒಂದೇ ಬಟ್ಟೆಯನ್ನು ವಿಭಿನ್ನ ರೀತಿಯಲ್ಲಿ ಧರಿಸುವುದನ್ನು ಕಲಿಯುವುದರಿಂದ ಹಣ ಮತ್ತು ಬಟ್ಟೆ ಎರಡೂ ಉಳಿಯುತ್ತದೆ. ಉದಾಹರಣೆಗೆ, ಒಂದು ಅನಾರ್ಕಲಿ ಕುರ್ತಿಯನ್ನು ಬರೀ ಲೆಗ್ಗಿಂಗ್ಸ್ ಜೊತೆ ಮಾತ್ರವಲ್ಲದೆ, ದುಪಟ್ಟಾ ಇಲ್ಲದೆ ಲಾಂಗ್ ಗೌನ್ ತರಹ ಧರಿಸಬಹುದು. ಹಾಗೆಯೇ ಜೀನ್ಸ್ ಮೇಲಿನ ಶರ್ಟ್‌ ಅನ್ನು ಬಟನ್ ಹಾಕದೆ ಒಳಗಡೆ ಕ್ರಾಪ್ ಟಾಪ್ ಧರಿಸಿ ಓಪನ್ ಜಾಕೆಟ್‌ನಂತೆ ಸ್ಟೈಲ್ ಮಾಡಬಹುದು.

ಆಕ್ಸೆಸರೀಸ್‌ಗಳ ಚಮತ್ಕಾರ
ಸರಳ ಮತ್ತು ಹಳೆಯ ಬಟ್ಟೆಗೂ ಕೇವಲ ಆಕ್ಸೆಸರೀಸ್ ಬದಲಾಯಿಸುವ ಮೂಲಕ ಅತ್ಯಾಧುನಿಕ ರಾಯಲ್ ಲುಕ್ ನೀಡಬಹುದು. ಒಂದು ಪ್ಲೇನ್ ಜೀನ್ಸ್ ಮತ್ತು ಟಾಪ್‌ಗೆ ದೊಡ್ಡದಾದ ಆಕ್ಸಿಡೈಸ್ಡ್ ಜುಮ್ಕಾ ಅಥವಾ ಸ್ಟೇಟ್‌ಮೆಂಟ್ ನೆಕ್ಲೇಸ್ ಹಾಕಿದರೆ ಇಂಡೋ-ವೆಸ್ಟರ್ನ್ ಲುಕ್ ಸಿಗುತ್ತದೆ. ಹಾಗೆಯೇ ಕಡು ಬಣ್ಣದ ಸ್ಕಾರ್ಫ್, ಸ್ಟೈಲಿಶ್ ಬೆಲ್ಟ್ ಅಥವಾ ಒಪ್ಪುವ ಸನ್‌ಗ್ಲಾಸ್ ಧರಿಸುವುದರಿಂದ ಇಡೀ ಔಟ್‌ಫಿಟ್ ರಾಯಲ್‌ ಆಗಿ ಕಾಣುತ್ತದೆ.

ಫಿಟ್ಟಿಂಗ್ ಮತ್ತು ಐರನ್‌ ಮುಖ್ಯ
ಬಟ್ಟೆ ಎಷ್ಟು ದುಬಾರಿಯಾಗಿದೆ ಎನ್ನುವುದಕ್ಕಿಂತ ಅದು ನಿಮಗೆ ಎಷ್ಟು ಚೆನ್ನಾಗಿ ಫಿಟ್ ಆಗಿದೆ ಎನ್ನುವುದು ಮುಖ್ಯ. ಸಡಿಲವಾದ ಅಥವಾ ತುಂಬಾ ಬಿಗಿಯಾದ ಬಟ್ಟೆಗಳು ನಿಮ್ಮ ಒಟ್ಟಾರೆ ಲುಕ್ ಅನ್ನು ಹಾಳುಮಾಡುತ್ತವೆ. ಸಾಮಾನ್ಯ ಬಟ್ಟೆಯನ್ನೇ ಸರಿಯಾಗಿ ಐರನ್‌ ಮಾಡಿ, ನೀಟಾಗಿ ಇನ್‌ಸರ್ಟ್ ಮಾಡಿ ಧರಿಸಿದರೆ ಅದು ಕ್ಲಾಸಿ ರಾಯಲ್ ಲುಕ್ ನೀಡುತ್ತದೆ.

Must Read