ಸ್ಪರ್ಧಿಸೋಕೆ ರೆಡಿ ಆಗಿದ್ದೀನಿ, ಟಿಕೆಟ್ ನೀಡೋದು ಹೈಕಮಾಂಡ್ ನಿರ್ಧಾರ : ಡಾ. ಗೋಪಾಲ‌ ಕಾರಜೋಳ

ದಿಗಂತ ವರದಿ ವಿಜಯಪುರ:

ವಿಧಾನ ಸಭೆ ಚುನಾವಣೆಗೆ ‌ನಾಗಠಾಣ ಮೀಸಲು ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಅಗತ್ಯ ತಯಾರಿ ಮಾಡಿಕೊಂಡಿರುವೆ. ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಗೋಪಾಲ‌ ಕಾರಜೋಳ ಹೇಳಿದರು.

‌ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ ಈಗಾಗಲೇ ವಿಧಾನ ಸಭೆ ಚುನಾವಣೆ ನಾಗಠಾಣ ಮತಕ್ಷೇತ್ರದಿಂದ ಸ್ಪರ್ಧೆಯ ಕುರಿತು ಹೇಳಿಕೆ ನೀಡಿದ್ದಾರೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.

ಪಕ್ಷದಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಮಾನದಂಡ ಅನುಸರಿಸಿದರೆ ತಂದೆಯವರೇ (ಗೋವಿಂದ ಕಾರಜೋಳ)
ನಿಲ್ಲುತ್ತಾರೆ. ಸಾಮರ್ಥ್ಯ ಪರಿಗಣಿಸಿ ಇಬ್ಬರಿಗೆ ಟಿಕೆಟ್ ನೀಡಿದರೆ ನಾನೂ ಕೂಡ ಸ್ಪರ್ಧಿಸುತ್ತೇನೆ. ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಅಲ್ಲದೆ ನಾಗಠಾಣ ಮೀಸಲು ಕ್ಷೇತ್ರಕ್ಕೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ ಎಂದರು. ಎರಡು ವರ್ಷಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಮತಕ್ಷೇತ್ರದಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಆದರೂ, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ. ಈಗ ಮತಕ್ಷೇತ್ರಾದ್ಯಂತ ಸಂಚರಿಸುತ್ತಿದ್ದೇನೆ ಎಂದರು.

ಜ.21 ರಂದು ಜೆ.ಪಿ. ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಬೆಳಗ್ಗೆ ನಡ್ಡಾ ಅವರು ಹೆಲಿಕಾಪ್ಟರ್ ಮೂಲಕ ಮೂಲಕ ವಿಜಯಪುರಕ್ಕೆ ಆಗಮಿಸಲಿದ್ದಾರೆ. ದೆಹಲಿಯಿಂದ‌ ವಿಶೇಷ ವಿಮಾನದ ಮೂಲಕ ಕಲಬುರಗಿ ಏರ್ ಪೋರ್ಟ್ ಗೆ ಆಗಮಿಸಲಿರುವ ಅವರು, ಬೆಳಗ್ಗೆ 11.‌30 ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬೆಳಗ್ಗೆ 11. 40 ಕ್ಕೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಹಿನ್ನೆಲೆ ಆಶ್ರಮಕ್ಕೆ ಭೇಟಿ ‌ನೀಡಲಿದ್ದಾರೆ. ಆಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದರು.

ನಂತರ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ನಗರದ ವಾರ್ಡ್ ನಂಬರ್ 12 ರ ಬಿಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜ್ ಬಳಿ ಮೈದಾನದಲ್ಲಿ ಮನೆ ಮನೆ ಭೇಟಿ ಹಾಗೂ ಸದಸ್ಯತ್ವ ಅಭಿಮಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಬಳಿಕ ವಾರ್ಡ್ ನಂಬರ್ 10 ರಲ್ಲಿ ಗೋಡೆ ಬರಹ‌ ಹಾಗೂ ಫಲಾನುಭವಿಗಳ ಮನೆಗೆ ಭೇಟಿ‌ ನೀಡಲಿದ್ದಾರೆ. ಈ ಸಂದರ್ಭ ಸಾಂಕೇತಿಕವಾಗಿ ಐದು‌ ಜನ ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 12. 45 ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂದಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದರು.

ಬಿಜೆಪಿ ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಜಿಲ್ಲಾ ವಕ್ತಾರ ಸುರೇಶ ಬಿರಾದಾರ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮುಖಂಡ ಕೃಷ್ಣಾ ಗುನ್ಹಾಳಕರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!