ಇಂದಿನ ಕಮರ್ಷಿಯಲ್ ಜಗತ್ತಿನಲ್ಲಿ ಮಕ್ಕಳು ಟಿವಿ, ಮೊಬೈಲ್ ಜಾಹೀರಾತುಗಳನ್ನು ನೋಡಿ ವಸ್ತುಗಳನ್ನು ಕೊಡಿಸುವಂತೆ ಹಠ ಮಾಡುವುದು ಸಾಮಾನ್ಯವಾಗಿದೆ. ಅನೇಕ ಪೋಷಕರು ಪ್ರೀತಿಯ ಹೆಸರಿನಲ್ಲಿ ಮಕ್ಕಳು ಕೇಳಿದ್ದನ್ನೆಲ್ಲ ತಕ್ಷಣವೇ ಕೊಡಿಸುತ್ತಾರೆ. ಆದರೆ, ಇದು ದೀರ್ಘಕಾಲದಲ್ಲಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು. ಬಾಲ್ಯದಲ್ಲೇ ಹಣದ ಮೌಲ್ಯ ಮತ್ತು ಉಳಿತಾಯದ ಮಹತ್ವವನ್ನು ತಿಳಿಸಿಕೊಡುವುದು ಶಾಲಾ ಶಿಕ್ಷಣದಷ್ಟೇ ಮುಖ್ಯ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಆರ್ಥಿಕ ಶಿಸ್ತು ಮತ್ತು ಸ್ಮಾರ್ಟ್ ಮನಿ ಹವ್ಯಾಸಗಳನ್ನು ಹೇಗೆ ಕಲಿಸಬಹುದು ಎಂಬುದರ ಬಗ್ಗೆ ತಿಳಿಯೋಣ.
ಮಕ್ಕಳಲ್ಲಿ ಆರ್ಥಿಕ ಶಿಸ್ತು ಮೂಡಿಸಲು 5 ಸೂತ್ರಗಳು
ಪಿಗ್ಗಿ ಬ್ಯಾಂಕ್ ಎಂಬ ಮೊದಲ ಪಾಠ
ಮಕ್ಕಳಿಗೆ ಉಳಿತಾಯದ ಆನಂದವನ್ನು ಪರಿಚಯಿಸಲು ಪಿಗ್ಗಿ ಬ್ಯಾಂಕ್ ಅತ್ಯುತ್ತಮ ಸಾಧನ. ಅವರಿಗೆ ಇಷ್ಟವಾದ ಕಾರ್ಟೂನ್ ಆಕಾರದ ಗಲ್ಲವನ್ನು ಕೊಡಿಸಿ. ಹಬ್ಬಗಳಲ್ಲಿ ಹಿರಿಯರು ನೀಡುವ ಕಾಸು ಅಥವಾ ಪಾಕೆಟ್ ಮನಿಯ ಒಂದು ಭಾಗವನ್ನು ಅದರಲ್ಲಿ ಹಾಕಲು ಪ್ರೋತ್ಸಾಹಿಸಿ. ಕಣ್ಣೆದುರೇ ಹಣದ ಕಾಸುಗಳು ಕೂಡಿ ದೊಡ್ಡ ಮೊತ್ತವಾಗುವುದನ್ನು ನೋಡಿ ಮಕ್ಕಳಿಗೆ ಉಳಿತಾಯದ ಮೇಲೆ ಗೌರವ ಮೂಡುತ್ತದೆ.
‘ಅಗತ್ಯ’ ಮತ್ತು ‘ಬಯಕೆ’ಗಳ ವ್ಯತ್ಯಾಸ
ಮಾರುಕಟ್ಟೆಗೆ ಹೋದಾಗ ಮಕ್ಕಳು ಕಂಡದ್ದನ್ನೆಲ್ಲ ಕೊಡಿಸುವಂತೆ ಹಠ ಮಾಡಿದರೆ, ಅವರಿಗೆ ‘ಅಗತ್ಯ’ ಮತ್ತು ‘ಬಯಕೆ’ಗಳ ನಡುವಿನ ವ್ಯತ್ಯಾಸವನ್ನು ಸರಳವಾಗಿ ತಿಳಿಸಬೇಕು. ಬದುಕು ನಡೆಸಲು ಕಡ್ಡಾಯವಾಗಿ ಬೇಕಾದವು ಯಾವುವು. ಇಲ್ಲದಿದ್ದರೂ ತೊಂದರೆಯಾಗದ, ಕೇವಲ ಆಸೆಗೆ ಕೊಳ್ಳುವವು ಯಾವುವು ಎಂಬ ವ್ಯತ್ಯಾಸ ತಿಳಿದ ಮಗು ಬೆಳೆದ ನಂತರ ಎಂದಿಗೂ ಸಾಲದ ಸುಳಿಗೆ ಸಿಲುಕುವುದಿಲ್ಲ.
ಗುರಿ ಆಧಾರಿತ ಉಳಿತಾಯ
ಮಕ್ಕಳು ಯಾವುದಾದರೂ ಬೆಲೆಬಾಳುವ ಸೈಕಲ್ ಅಥವಾ ಗ್ಯಾಜೆಟ್ ಕೇಳಿದಾಗ, ನಿನ್ನ ಗಲ್ಲದಲ್ಲಿ ನೀನು ಇಷ್ಟು ಹಣ ಉಳಿಸು, ಬಾಕಿ ಹಣವನ್ನು ನಾನು ಹಾಕಿ ಕೊಡಿಸುತ್ತೇನೆ ಎಂದು ಸವಾಲು ಹಾಕಿ. ತಮ್ಮ ಸ್ವಂತ ಹಣದಿಂದ ವಸ್ತುವನ್ನು ಕೊಂಡಾಗ ಮಕ್ಕಳಿಗೆ ಆ ವಸ್ತುವಿನ ಮೇಲೆ ಕಾಳಜಿ ಹೆಚ್ಚಿರುತ್ತದೆ ಮತ್ತು ಹಣ ಸಂಪಾದನೆಯ ಹಿಂದಿರುವ ಶ್ರಮದ ಅರಿವಾಗುತ್ತದೆ.
ಬಜೆಟಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಿ
ತಿಂಗಳ ದಿನಸಿ ಸಾಮಗ್ರಿ ಅಥವಾ ತರಕಾರಿ ಖರೀದಿಸಲು ಹೋಗುವಾಗ ಮಕ್ಕಳನ್ನು ಜೊತೆಗೆ ಕರೆದೊಯ್ಯಿರಿ. ವಸ್ತುಗಳ ಬೆಲೆಯನ್ನು ಹೋಲಿಕೆ ಮಾಡುವುದನ್ನು ಕಲಿಸಿ. ನಿರ್ದಿಷ್ಟ ಬಜೆಟ್‌ನಲ್ಲೇ ಇಡೀ ತಿಂಗಳ ಮನೆ ಖರ್ಚನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನು ಅವರು ಕಣ್ಣಾರೆ ನೋಡಿದರೆ, ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುತ್ತಾರೆ.
ಮೈನರ್ ಬ್ಯಾಂಕ್ ಖಾತೆಯ ಪರಿಚಯ
ಮಗುವಿಗೆ 10 ವರ್ಷ ತುಂಬಿದ ತಕ್ಷಣ ಹತ್ತಿರದ ಬ್ಯಾಂಕ್‌ಗೆ ಕರೆದೊಯ್ದು ಅವರ ಹೆಸರಲ್ಲೇ ಒಂದು ‘ಮೈನರ್ ಬ್ಯಾಂಕ್ ಅಕೌಂಟ್’ ತೆರೆಯಿರಿ. ಡಿಪಾಸಿಟ್ ಮಾಡುವುದು ಹೇಗೆ, ಎಟಿಎಂ ಹೇಗೆ ಕೆಲಸ ಮಾಡುತ್ತದೆ ಮತ್ತು ಬ್ಯಾಂಕ್‌ನಲ್ಲಿಟ್ಟ ಹಣಕ್ಕೆ ಹೇಗೆ ಬಡ್ಡಿ ಸಿಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡಿ. ಇದು ಅವರಲ್ಲಿ ದೊಡ್ಡವರಾದ ಮೇಲೆ ಹೂಡಿಕೆ ಮಾಡುವ ಆಸಕ್ತಿಯನ್ನು ಹೆಚ್ಚಿಸುತ್ತದೆ.



