ಅಮೃತ ಸೋಮೇಶ್ವರ ಅವರ ನಿಧನಕ್ಕೆ ಆರೆಸೆಸ್ಸ್ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಜಾನಪದ ತಜ್ಞ, ಕನ್ನಡ ಮತ್ತು ತುಳು ಸಾಹಿತ್ಯಲೋಕದ ಮೇರು ವ್ಯಕ್ತಿತ್ವ, ಯಕ್ಷಗಾನ ಪ್ರಸಂಗಕರ್ತ ಪ್ರೊ. ಅಮೃತ ಸೋಮೇಶ್ವರ ಅವರ ನಿಧನವಾರ್ತೆ ಅತ್ಯಂತ ದುಃಖಕರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಅವರು ಸಂತಾಪ ಸೂಚಿಸಿದ್ದಾರೆ.

ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ನಾಟಕ, ಸಂಸ್ಕೃತಿ ಚಿಂತನೆ, ಭೂತಾರಾಧನೆ ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಅಕ್ಷರಲೋಕದ ನಿರಂತರ ಕಾರ್ಯದಲ್ಲಿನ ಅವರ ಶ್ರಮ ಅನನ್ಯವಾದದ್ದು. ಅವರ ಸಾಹಿತ್ಯಕೃಷಿಗೆ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರ್ಹವಾಗಿಯೇ ಸಂದಿದ್ದವು. ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರಿಗೂ ಆತ್ಮೀಯರಾಗಿದ್ದವರು.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಹತ್ತಿರದ ಒಡನಾಟ ಹೊಂದಿದ್ದ ಪ್ರೊ. ಅಮೃತ ಸೋಮೇಶ್ವರ ಅವರು ರಾಷ್ಟ್ರೋತ್ಥಾನ ಸಾಹಿತ್ಯದ ‘ಭಾರತ – ಭಾರತಿ’ ಪುಸ್ತಕ ಸರಣಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು . ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!