ಸ್ಯಾಂಟ್ರೋ ರವಿ ಬಂಧನ: ಖಚಿತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

೧೧ ದಿನಗಳ ನಂತರ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ರಾಜ್ಯ ಪೋಲಿಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತ ಪಡಿಸಿದ್ದಾರೆ.

ಅವರು ಶುಕ್ರವಾರ ಉಡುಪಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾಲ್ಕೈದು ತಂಡವನ್ನು ರಚಿಸಿ ಮೈಸೂರು ಹಾಗು ರಾಮನಗರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು. ಪೊಲೀಸರ ವಿಶೇಷ ಪ್ರಯತ್ನದಿಂದ ಸ್ಯಾಂಟ್ರೋ ರವಿ ಬಂಧನವಾಗಿದೆ ಎಂದರು.

ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಆತನನ್ನು ಬೆಂಗಳೂರಿಗೆ ಕರೆತರಲಾಗುವುದು. ಸರ್ಕಾರದ ಮೇಲೆ ಎಲ್ಲಾ ರೀತಿಯ ಟೀಕೆಗಳು ಇತ್ತು. ಸರ್ಕಾರ ಮೀನ ಮೇಷ ಎಣಿಸುತ್ತಿದೆ, ಒತ್ತಡ ಇದೆ ಎನ್ನುತ್ತಿದ್ದರು. ಆದರೆ ಸರಕಾರದ ಮೇಲೆ ಯಾವ ಒತ್ತಡವು ಇರಲಿಲ್ಲ, ನಾವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ ಹೇಗೆ ಇದ್ದರೂ ಕರೆತಂದು ವಿಚಾರಿಸಬೇಕೆಂದು ಸೂಚನೆ ನೀಡಿದ್ದೇವು, ಆತ ನಡೆಸಿದ ಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗಬೇಕು ಎಂದರು.

ಗುಜರಾತ್ ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ಕರೆ ತರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಸಂಜೆ ಆತನನ್ನು ಬೆಂಗಳೂರಿಗೆ ಕರೆದಿರುವ ಸಾಧ್ಯತೆ ಇದೆ ಎಂದರು.

ಎರಡು – ಮೂರು ಕಡೆ ಅಂತಿಮ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ ರವಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಲ್ಲಾ ಆಯಮದಲ್ಲೂ ತನಿಖೆ ನಡೆಯುತ್ತದೆ. ಏನೇ ಇದ್ದರೂ ಅಡಗಿಸಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತದೆ, ಆತ ನಡೆಸಿದ ಎಲ್ಲ ಕೃತ್ಯಕ್ಕೆ ಶಿಕ್ಷೆಯಾಗುತ್ತದೆ. ಯಾವುದೇ ಅಧಿಕಾರಿ ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ. ಆತನ ಜೊತೆಗೆ ಇರುವವರನ್ನು ಕೂಡ ಬಂಧಿಸಲಾಗುವುದು. ನಿನ್ನೆ ನಾನು ಅಹಮದಾಬಾದ್ ನಲ್ಲಿ ಇದ್ದದ್ದು ಕಾಕತಾಳಿಯವಷ್ಟೇ ಎಂದು ಸ್ಪಷ್ಟನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!