ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು : ಬಸವಲಿಂಗ ಸ್ವಾಮೀಜಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಗಡಿನಾಡ ಭಾಗದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸೇವೆಯಲ್ಲಿ ಹಲವಾರು ಕಲಾವಿದರು, ಸಾಹಿತಿಗಳಿದ್ದಾರೆ. ಇಂತಹ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ ಎಂದು ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ಮೊಳಕಾಲ್ಮೂರು ಇವರ ಸಹಯೋಗದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಬೊಮ್ಮದೇವರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಭಾರತ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಗಡಿನಾಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡ ಕಲೆ ಸಂಸ್ಕೃತಿಯಲ್ಲಿ ಮೊಳಕಾಲ್ಮೂರು ತಾಲ್ಲೂಕು ತುಂಬಾ ಸಮೃದ್ಧವಾಗಿದೆ ಹಲವಾರು ಪ್ರತಿಭೆಗಳು ಈ ನೆಲದಲ್ಲಿ ಕಲಾ ಸೇವೆಯಲ್ಲಿ ತೊಡಗಿದ್ದಾರೆ ಇನ್ನು ಕೆಲವರು ಮುಖ್ಯ ವಾಹಿನಿಯಿಂದ ವಂಚಿತರಾಗಿದ್ದಾರೆ ಇಂತಹ ವಂಚಿತ ಪ್ರತಿಭಾವಂತರಿಗಾಗಿಯೇ ಈ ವೇದಿಕೆಗಳನ್ನು ಸರ್ಕಾರ ಮಾಡುತ್ತಿದೆ ಇದರ ಪ್ರಯೋಜನ ಸ್ಥಳೀಯ ಕಲಾವಿದರು ಪಡೆದುಕೊಳ್ಳಬೇಕು ಎಂದರು.
ಸಾಹಿತಿ ಕಲಾವಿದರ ಮಾಸಾಶನ ಮಂಜೂರಾತಿ ಸಮಿತಿ ಸದಸ್ಯ ಡಿ.ಒ.ಮುರಾರ್ಜಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ಕಲಾವಿದರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಗಡಿ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಲಾವಿದರು ತಾವು ಭಾಗವಹಿಸುವ ಯಾವುದೇ ಕಾರ್ಯಕ್ರಮ ಇರಲಿ, ಪ್ರದರ್ಶಿಸುವ ಕಲೆಯ ಪೋಟೋ ಕರಪತ್ರ ಇತರೆ ದಾಖಲೆಗಳನ್ನು ಸಂಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಮಾಸಾಶನಕ್ಕೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಗಡಿನಾಡ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಸಹ ಶಿಕ್ಷಕ ಯಲ್ಲಪ್ಪ, ಗಡಿನಾಡ ಕಲಾವಿದರ ಬದುಕು ಮತ್ತು ಭವಣೆ ಕುರಿತು ಜಾನಪದ ಹಿರಿಯ ಕಲಾವಿದ ಎಂ.ಡಿ.ಲತೀಫ್ ಸಾಬ್ ಉಪನ್ಯಾಸ ನೀಡಿದರು.
ಸಂಗೀತ ಶಿಕ್ಷಕ ಕೆ.ಓ.ಶಿವಣ್ಣ, ಕಲಾವಿದರಾದ ಕೋನಸಾಗರ ಶಿವು, ಯರ್ರೇನಹಳ್ಳಿ ಕಲ್ಲೇಶ್, ಮರ್ಲಹಳ್ಳಿ ಪರಮೇಶ್, ನಿಂಗಣ್ಣ, ರಾಮಯ್ಯ, ತಿಪ್ಪೇಸ್ವಾಮಿ, ಯಲ್ಲಮ್ಮ, ಮಾರಣ್ಣ, ಬೊಮ್ಮಲಿಂಗಪ್ಪ, ನುಂಕೇಶ್ ಇತರರು ಸಂಗೀತ ಗಾಯನ, ಸೋಬಾನೆ ಪದಗಳು, ಭಜನೆ, ಭಕ್ತಿ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ರಂಗ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ಎಲ್.ಗುರುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಜಿ.ಹೆಚ್.ಈಶ್ವರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಂಡಪ್ಪ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!