Wednesday, September 27, 2023

Latest Posts

ರುಡ್ ಸೆಟ್‌ನಲ್ಲಿ ಸ್ವಯಂ ಉದ್ಯೋಗ ಜನಜಾಗೃತಿ ಕಾರ್ಯಕ್ರಮ

ಹೊಸ ದಿಗಂತ ವರದಿ, ಚಿತ್ರದುರ್ಗ:

ಡಿಗ್ರಿ ಪಡೆದು ಇನ್ನೊಬ್ಬರ ಅಂಗಡಿಯಲ್ಲಿ ಲೆಕ್ಕ ಬರೆಯುವುದಕ್ಕಿಂತ ಸ್ವತಃ ತಾವೇ ಲೆಕ್ಕ ಬರೆದು ಇನ್ನೊಂದಿಷ್ಟು ಜನರಿಗೆ ಉದ್ಯೋಗ ಕೊಡುವಂತಹ ವ್ಯವಸ್ಥೆ ಆಗಬೇಕು ಎಂಬ ವೀರೇಂದ್ರ ಹೆಗಡೆಯವರ ಮಾತುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರುಡ್ ಸೆಟ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಂಜುಳಾ ಮಾತನಾಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕಲ್ಪವೃಕ್ಷವು ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ವಯಂ ಉದ್ಯೋಗಗಳ ಬಗ್ಗೆ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾಹಿತಿ ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಘವಹಿಸಿ ಮಾತನಾಡಿದ ಅವರು, ಓದು ಬರಹ ಕಲಿತು ಕೂಡುವ ಲೆಕ್ಕ ಕಲಿತ ವಿದ್ಯಾರ್ಥಿಗಳು, ಸ್ವಯಂ ಉದ್ಯೋಗಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಹ ಕೌಶಲ್ಯ ಇರುತ್ತದೆ. ಕೌಶಲ್ಯಗಳನ್ನು ಹೊರತೆಗೆದು, ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ತರಬೇತಿಗಳು ಅಗತ್ಯ. ಸ್ವ ಉದ್ಯೋಗಳ ಮುಖಾಂತರ ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ನಿರ್ಮಿಸಿಕೊಳ್ಳಬಹುದು. ದೇಶಕ್ಕೂ ಸಹ ಆದಾಯ ತಂದು ಕೊಡಬಹುದು. ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಉದ್ಯೋಗದ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚು ತಾಂತ್ರಿಕತೆಯಿಂದ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ. ಹಾಗಾಗಿ ತಾಂತ್ರಿಕ ಜ್ಞಾನವನ್ನೇ ಅವರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಂ ಮಾತನಾಡಿ, ಇವತ್ತು ಭಾರತ ದೇಶದಲ್ಲಿ ನಿರುದ್ಯೋಗ ಎಂಬುದು ತಾಂಡವವಾಡುತ್ತಿದೆ. ಅದಕ್ಕಾಗಿ ಯುವಕರು ಸ್ವಯಂ ಉದ್ಯೋಗಗಳಲ್ಲಿ ಭಾಗವಹಿಸಿ ಉದ್ಯೋಗಗಳನ್ನು ಸೃಷ್ಟಿಸಿಕೊಂಡು, ಇನ್ನಿತರರಿಗೂ ಉದ್ಯೋಗ ಸೃಷ್ಟಿ ಮಾಡಿ ಕೊಡಬೇಕು. ಇಂದು ವಿದ್ಯಾರ್ಥಿಗಳು ಪದವಿ, ಡಬಲ್ ಡಿಗ್ರಿ ಪಡೆದರೂ ಸಹ ಉದ್ಯೋಗ ಸಿಗುತ್ತಿಲ್ಲವೆಂದು ಕೊರಗುತ್ತಿದ್ದಾರೆ. ನಿರುತ್ಸಾಹ ಹೊಂದುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಪ್ರತಿ ಜಿಲ್ಲೆಯಲ್ಲೂ ಸಹ ಉದ್ಯೋಗ ತರಬೇತಿಗಳನ್ನು ನೀಡಿ, ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ ಎಂದರು.
ಇಲ್ಲಿ ವಿವಿಧ ರೀತಿಯ ತರಬೇತಿಗಳನ್ನು ಕೊಡುವುದಲ್ಲದೆ ಉದ್ಯೋಗಗಳಿಗೆ ಸಾಲದ ವ್ಯವಸ್ಥೆಯನ್ನು ಸಹ ಮಾಡಿ ಜೀವನದಲ್ಲಿ ಭದ್ರತೆ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ವಿವಿಧ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಬ್ಯೂಟಿ ಪಾರ್ಲರ್, ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಯುವ ಜನಾಂಗಕ್ಕೆ ಯಾವುದರಲ್ಲಿ ತರಬೇತಿ ಪಡೆಯಲು ಇಷ್ಟಪಟ್ಟಂತಹ ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಆರಂಭಿಸಬೇಕು ಎಂದು ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಡಾ. ಹೆಚ್.ಕೆ.ಎಸ್. ಸ್ವಾಮಿ, ವೆಂಕಟೇಶ ಶೆಟ್ಟರು, ಹೆಚ್.ಎಸ್. ರಚನಾ, ಹೆಚ್.ಎಸ್. ಪ್ರೇರಣಾ, ಹೇಮಾ, ಶಶಿಕಲಾ, ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿ ವರ್ಗ, ಶಿಕ್ಷಕರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!