ಹೊಸದಿಗಂತ ವರದಿ ಬೆಳಗಾವಿ:
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿಮಾನ ನಿಲ್ದಾಣ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ಕಲಾ ನಡಿಗೆ ನಿಮ್ಮ ಬಳಿಗೆ” ಕಾರ್ಯಕ್ರಮವು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ವಿಮಾನ ನಿಲ್ದಾಣ, ಬೆಳಗಾವಿಯ ನಿರ್ದೇಶಕರಾದ ಎಸ್. ತ್ಯಾಗರಾಜನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲಾವಿದರ ಅತ್ಯುತ್ತಮ ಪ್ರದರ್ಶನವನ್ನು ಮೆಚ್ಚಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆ ಮತ್ತು ಕಲೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿರುವ ಜಾನಕಿ ಕೆ ಎಮ್ ಅವರೂ ಕೂಡ ವೀರಗಾಸೆ ಭರತನಾಟ್ಯ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವತಿ ಭಜಂತ್ರಿ ಅವರು, ನಮ್ಮ ನಾಡಿನ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ವಿಶೇಷವಾಗಿ ಗ್ರಾಮೀಣ ಜನಪದ ಕಲೆಗಳ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಖ್ಯಾತ ಭರತನಾಟ್ಯ ಕಲಾವಿದೆ ರೇಖಾ ಹಗಡೆ ಅವರ ತಂಡದಿಂದ ಸಮೂಹ ಭರತನಾಟ್ಯ ಪ್ರದರ್ಶನ ನಡೆಯಿತು. ನಂತರ ನಾದಸುಧಾ ಸುಗಮ ಸಂಗೀತ ಅಕಾಡೆಮಿಯ ಸತ್ಯನಾರಾಯಣ ಹಾಗೂ ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟು ಪ್ರೇಕ್ಷಕರ ಮನಗೆದ್ದರು.
ಇದೇ ವೇಳೆ ನಾಡಿನ ಹೆಮ್ಮೆಯ ಜನಪದ ಕಲಾವಿದ ಗೂಳಪ್ಪ ವಿಜಯನಗರ ಅವರು ವೀರಗಾಸೆ ಪ್ರದರ್ಶನ ನೀಡುವ ಮೂಲಕ ಸಭಿಕರಿಂದ ಭಾರಿ ಮೆಚ್ಚುಗೆ ಪಡೆದರು. ಕಾರ್ಯಕ್ರಮದಲ್ಲಿ ಅನಿಲ್ ಬೇಕಲ್ (ಎಲೆಕ್ಟ್ರಿಕ್ ಇನ್‌ಚಾರ್ಜ್) ಹಾಗೂ ಲಕ್ಷ್ಮಿ (ಮ್ಯಾನೇಜರ್) ಉಪಸ್ಥಿತರಿದ್ದರು.
ಕಲಾ, ಸಂಸ್ಕೃತಿ ಮತ್ತು ಜನಪದ ಪರಂಪರೆಯ ವೈಭವವನ್ನು ಅನಾವರಣಗೊಳಿಸಿದ ಈ ಕಾರ್ಯಕ್ರಮವು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆದು ಯಶಸ್ವಿಯಾಗಿ ಸಂಪನ್ನಗೊಂಡಿತು.



