June 26, 2026
Friday, June 26, 2026
spot_img

ಮಳೆಗಾಲದಲ್ಲಿ ಹೆಚ್ಚುವ ಸಂಧಿವಾತ ಸಮಸ್ಯೆ! ಇದಕ್ಕೆ ಕಾರಣವೇನು? ಮುಂಜಾಗ್ರತಾ ಕ್ರಮಗಳೇನು?

ಮಳೆಗಾಲದಲ್ಲಿ ಕೀಲು ಬಿಗಿತ,,ಕೀಲುಗಳಲ್ಲಿ ನೋವು ಹೆಚ್ಚಾಗುವುದು ಸಾಮಾನ್ಯ ಅದರಲ್ಲೂ ರುಮಟಾಯ್ಡ್‌ ಆರ್ಥರೈಟಿಸ್‌ ಅಥವಾ ಅಸ್ಟಿಯೊ ಆರ್ಥರೈಟಿಸ್‌ ಸಮಸ್ಯೆ ಇರುವವರಲ್ಲಿ ಮಳೆಗಾಲದಲ್ಲಿ ಕೀಲು ನೋವಿನ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ . ವಾತಾವರಣದಲ್ಲಿ ಬದಲಾವಣೆ, ತಾಪಮಾನ ಇಳಿಕೆ, ವಾತಾವರಣದಲ್ಲಿ ಹೆಚ್ಚುವ ತೇವಾಂಶ ನೇರವಾಗಿ ನಮ್ಮ ಕೀಲುಗಳ ಮೇಲೆ ಪರಿಣಾಮ ಬೀರುತ್ತವೆ. ಇಂತಹ ವಾತಾವರಣದಲ್ಲಿ ನಮ್ಮ ರಕ್ತನಾಳಗಳ ಗಾತ್ರ ಕುಗ್ಗುತ್ತವೆ ಹೀಗಾಗಿ ಕೀಲುಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ.ಇದರಿಂದ ಕೀಲುಗಳ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ನಮ್ಮ ಕೀಲುಗಳಲ್ಲಿ ಸೈನೊವಿಲ್‌ ಫ್ಲುಯಿಡ್‌ನ ಸ್ನಿಗ್ದತೆ (ವಿಸ್ಕೊಸಿಟಿ) ಹೆಚ್ಚಾಗುವುದರಿಂದ ಕೀಲುಗಳ ಚಲನೆ ಸರಳವಾಗಿರುವುದಿಲ್ಲ ಇದರಿಂದ ಕೂಡ ಕೀಲುಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಚಳಿ ವಾತಾವರಣದಲ್ಲಿ ನಮ್ಮ ಅಭ್ಯಾಸಗಳು ಕೂಡ ಜಡವಾಗುತ್ತದೆ, ನಮ್ಮ ಚಲನೆಯು ಕಡಿಮೆಯಾಗುವುದಿಂದ ಕೀಲಿನಲ್ಲಿ , ಅದರ ಸುತ್ತಮುತ್ತಲಿನ ಸ್ನಾಯುಗಳಲ್ಲಿ ಬಿಗಿತ ಹೆಚ್ಚಾಗುತ್ತದೆ.ಇದರಿಂದ ಕೂಡ ಕೀಲುಗಳಲ್ಲಿ ನೋವು ಅಧಿಕವಾಗುವ ಸಾಧ್ಯತೆ ಇರುತ್ತದೆ.

ಆರ್ಥರೈಟಿಸ್‌ ಸಮಸ್ಯೆಗೆ ಕಾರಣಗಳೇನು?

ಆಸ್ಟಿಯೊ ಆರ್ಥರೈಟಿಸ್‌ ಮಹಿಳೆಯರಲ್ಲಿ 40 ವರ್ಷ ಮೇಲ್ಪಟ್ಟು ಹಾಗೂ ಪುರುಷರಲ್ಲಿ 60 ವರ್ಷ ಮೇಲ್ಟಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ದೈನಂದಿನ ಅಭ್ಯಾಸಗಳು. ತಪ್ಪಾದ ಭಂಗಿಯಲ್ಲಿ ಕೂರುವುದು, ಮಂಡಿಗೆ ಒತ್ತಡ ಬೀಳುವಂತಹ ಭಂಗಿಯಲ್ಲಿ ಕೆಲಸ ಮಾಡುವದರಿಂದ ಮಂಡಿಯ ಕೀಲುಗಳಲ್ಲಿ ಸವೆತ ಉಂಟಾಗುತ್ತದೆ. ಇದರಿಂದ ಆಸ್ಟಿಯೊ ಆಥ್ರೈಟಿಸ್‌ ಸಮಸ್ಯೆ ಕಾಣಿಸಿಕೊಳ್ಲುತ್ತದೆ.
ರುಮಟಾಯ್ಡ್‌ ಆರ್ಥರೈಟಿಸ್‌ನ್ನು ಆಟೋ ಇಮ್ಯೂನ್‌ ರೋಗ ಎಂದು ಕರೆಯಲಾಗುತ್ತದೆ. ನಮ್ಮ ರೋಗನಿರೋಧಕ ಶಕ್ತಿ ನಮ್ಮ ದೇಹದ ಮೇಲೆಯೇ ದಾಳಿ ಮಾಡುವಂತಹ ಸಮಸ್ಯೆ. ಇದು 30-50 ವರ್ಷದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಯಾವ ರೀತಿಯ ಆರ್ಥರೈಟಿಸ್‌ ಎಂಬುದನ್ನು ವೈದ್ಯಕೀಯ ತಪಾಸಣೆಯಿಂದ ಕಂಡುಕೊಳ್ಳಬಹುದು.

ಮುನ್ನೆಚ್ಚರಿಕೆ ಕ್ರಮಗಳೇನು?

ಆಸ್ಟಿಯೋ ಆರ್ಥರೈಟಿಸ್‌ ಇಂತಹ ಸಮಸ್ಯೆ ಬರದಂತೆ ತಡೆಯಲು 40 ವರ್ಷದ ಮೇಲ್ಪಟ್ಟ ಮಹಿಳೆಯರು, 60 ವರ್ಷ ಮೇಲ್ಪಟ್ಟ ಪುರುಷರು ಕೀಲುಗಳಿಗೆ ಅತಿಯಾದ ಶ್ರಮ ನೀಡುವ ಕೆಲಸಗಳನ್ನು ಮಾಡಬಾರದು. ಹಾಗೇ ನೆಲದ ಮೇಲೆ ಬಹಳ ಹೊತ್ತು ಕೂರುವುದು , ಅಥವಾ ಸರಿಯಾದ ಭಂಗಿಯಲ್ಲಿ ಕೂರದೇ ಇರುವುದು , ಅತಿಯಾದ ತೋಟದ ಕೆಲಸ, ಹೆಚ್ಚು ಮೆಟ್ಟಿಲು, ಗುಡ್ಡ ಹತ್ತುವುದು ಮಾಡುವುದು ಈ ಸಮಸ್ಯೆಗೆ ಕಾರಣವಾಗಬಹುದು.

ಕೀಲುನೋವಿನ ನಿರ್ವಹಣೆ ಮನೆಯಲ್ಲೇ ಹೇಗೆ?

ಶಾಖ ಚಿಕಿತ್ಸೆ – ತಂಪಾದ ವಾತಾವರಣದ ಸಮಯದಲ್ಲಿ ಸ್ನಾಯುಗಳನ್ನು ಬೆಚ್ಚಗಿಡುವುದು ಅಗತ್ಯ. ಬಿಸಿ ನೀರಿನ ಸ್ನಾನ, ಸ್ನಾಯುಗಳಿಗೆ ಬಿಸಿ ಶಾಖ ನೀಡುವುದರಿಂದ ಕೀಲುಗಳಿಗೆ ರಕ್ತಸಂಚಾರ ಹೆಚ್ಚಾಗಿ ನೋವು ಕಡಿಮೆಯಾಗುತ್ತದೆ.

ವೈದ್ಯರ ಸಲಹೆಯಂತೆ ಔಷದೋಪಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೂ ಚಳಿಯ ವಾತಾವರಣದಲ್ಲಿ ಆದಷ್ಟು ಬೆಚ್ಚಗಿನ ಉಡುಪು ಧರಿಸಿ.

ನೋವು ಅಧಿಕವಾಗಿದ್ದಾಗ ಫಿಸಿಯೋಥೆರಪಿ ಪಡೆಯುವುದು ಅಗತ್ಯವಾಗುತ್ತದೆ.

ತೂಕ ನಿಯಂತ್ರಣ ಅತ್ಯಗತ್ಯ ಜೊತೆಗೆ ಮಳೆಗಾಲವೆಂದು ಜಡವಾಗಿ ಕೂರದೇ, ವಾಕಿಂಗ್‌, ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬೀರದ ಲೈಟ್‌ ವ್ಯಾಯಾಮಗಳು , ಸೈಕ್ಲಿಂಗ್‌, ಸ್ವಿಮ್ಮಿಂಗ್‌ ,ಯೋಗದಂತಹ ಅಭ್ಯಾಸಗಳು ಸ್ನಾಯುಗಳನ್ನು ಆರೋಗ್ಯವಾಗಿಡಲು ನೆರವಾಗುತ್ತವೆ.

ಚೆನ್ನಾಗಿ ನೀರಿನ ಸೇವನೆ, ಪ್ರೊಟೀನ್‌ ಯುಕ್ತ ಆಹಾರ ಕೂಡ ಅಗತ್ಯ. ಜೊತೆಗೆ ವಿಟಮಿನ್‌ ಡಿ ಮತ್ತು ಕ್ಯಾಲ್ಶಿಯಮ್‌ ಅಂಶಗಳಿರುವ ಹಾಲು, ಮೊಸರು, ತುಪ್ಪ, ಬೆಣ್ಣೆ ಸೇವನೆ ಉತ್ತಮ. ನಿತ್ಯ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು, ಹಸಿರು ತರಕಾರಿ ಬಳಕೆ ಇರಲಿ. ಖರಿದ ಪದಾರ್ಥ , ಪ್ರೊಸೆಸ್ಡ್ ಪೂಡ್‌ ಬಳಕೆಯನ್ನು ಆದಷ್ಟು ತಪ್ಪಿಸಿ.

ಡಾ ಅಭಿಷೇಕ್‌ ಯಾದವ್‌

ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆರ್ಥೋಪೆಡಿಕ್‌ ಸರ್ಜನ್‌.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !