ಬನವಾಸಿಯ ಕಲಾವಿದನ ಕೈಚಳಕ: ನೀರಿನ ಮೇಲೆ ಅಯೋದ್ಯೆ ಶ್ರೀ ರಾಮ ಮಂದಿರ ಚಿತ್ತಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ ಮಂದಿರ ಉದ್ಘಾಟನೆಯ ಕ್ಷಣಗಣನೆ ಆರಂಭವಾಗಿದೆ. ಕನ್ನಡದ ಮೊದಲ ರಾಜಧಾನಿ ಎನಿಸಿಕೊಂಡ ಬನವಾಸಿಯಲ್ಲಿ ಕಲಾವಿದರೊಬ್ಬರು ನೀರಿನ ಮೇಲೆ ರಾಮನ ಮತ್ತು ರಾಮ ಮಂದಿರದ ರಂಗೋಲಿ ಬಿಡಿಸಿ ತಮ್ಮ ಕೊಡುಗೆ ಸಮರ್ಪಿಸಿದ್ದಾರೆ.

ಬನವಾಸಿಯವರೇ ಆದ, ವೃತ್ತಿಯಲ್ಲಿ ಪೌರೋಹಿತ್ಯ ನಿಭಾಯಿಸುವ ಗಣೇಶ ಖರೆ ಈ ಕಲೆ ತೋರಿದ್ದಾರೆ. ಸುಮಾರು ಮೂರು ತಾಸುಗಳ ಕಾಲ ಅವಿರತ ಶ್ರಮ ವಹಿಸಿ ಮಂಗಳವಾರ ನೀರಿನ ಮೇಲೆ ರಂಗೋಲಿ ಬಿಡಿಸಿದ್ದಾರೆ.

ಗಣೇಶ ಖರೆ ವೃತ್ತಿಯಲ್ಲಿ ಪೌರೋಹಿತ್ಯವಾದರೂ ಕಲೆಯ ಬಗ್ಗೆ ಕಳೆದ 15 ವರ್ಷಗಳಿಂದ ಆಸಕ್ತಿ ವಹಿಸಿಕೊಂಡು ಬಂದವರು. ಹವ್ಯಾಸಿ ಕಲಾವಿದರಾಗಿ ರಂಗೋಲಿ ಬಿಡಿಸುವಿಕೆ ಆರಂಭಿಸಿದ ಅವರು, ಪಾತ್ರೆಯಲ್ಲಿ ನೀರಿಟ್ಟುಕೊಂಡು ಅದರ ಮೇಲೆ ತೇಲುವ ರಂಗೋಲಿ ಹುಡಿಗಳನ್ನು ಬಳಸಿ ರಂಗವಲ್ಲಿ ಸಿದ್ಧಪಡಿಸುತ್ತಾರೆ. ಇದುವರೆಗೂ 500ಕ್ಕೂ ಅಧಿಕ ಮಾದರಿಯ ರಂಗೋಲಿ ಬಿಡಿಸಿದ್ದೇನೆ ಎನ್ನುವ ಖರೆ, ಭಾರತೀಯ ಐತಿಹಾಸಿಕ ಸ್ಥಳಗಳು, ಪ್ರಸಿದ್ಧ ವ್ಯಕ್ತಿಗಳು, ಸುಧಾಮೂರ್ತಿ, ಅಬ್ದುಲ್ ಕಲಾಂ, ನರೇಂದ್ರ ಮೋದಿಯಂತಹ ವ್ಯಕ್ತಿಗಳನ್ನೂ ರಂಗೋಲಿ ಮೂಲಕ ಅರಳಿಸಿ ಜನಮನ್ನಣೆ ಗಳಿಸಿದ್ದಾರೆ. ರಾಮಮಂದಿರ ಉದ್ಘಾಟನೆ ಸಮೀಪದ ಈ ದಿನಗಳಲ್ಲಿ ಅವರ ಕಲೆಯನ್ನು ಮಂಗಳವಾರ ಅನೇಕರು ಕಣ್ತುಂಬಿಕೊಂಡಿದ್ದಾರೆ.

ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣ ಇದು. ಕಲಾವಿದನಾಗಿ ರಾಮಮಂದಿರಕ್ಕೆ ಈ ರೀತಿಯಾಗಿ ಕೊಡುಗೆ ನೀಡಿದ್ದೇನೆ ಎನ್ನುತ್ತಾರೆ ಗಣೇಶ ಖರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!