May 20, 2026
Wednesday, May 20, 2026
spot_img

ಎರಡೇ ದಿನದಲ್ಲಿ ಐತಿಹಾಸಿಕ ದಾಖಲೆಯಿಂದ ಹೀನಾಯ ಪತನಕ್ಕೆ ಸಾಕ್ಷಿಯಾದ ಅರುಣ್ ಜೇಟ್ಲಿ ಸ್ಟೇಡಿಯಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲಿ ಒಂದೇ ವಾರದ ಅಂತರದಲ್ಲಿ ಒಂದು ತಂಡ ಅತೀ ಹೆಚ್ಚು ಸಂಭ್ರಮ ಮತ್ತು ಅತೀ ದೊಡ್ಡ ಅವಮಾನವನ್ನು ಅನುಭವಿಸುವುದು ಅಪರೂಪ. ಅಂತಹದ್ದೊಂದು ವಿಚಿತ್ರ ಸ್ಥಿತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಲುಪಿದೆ. ಏಪ್ರಿಲ್ 25 ರಂದು ಇದೇ ಅರುಣ್ ಜೇಟ್ಲಿ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್ ಬಾರಿಸಿ ದಾಖಲೆ ಬರೆದಿದ್ದ ಡೆಲ್ಲಿ, ಇಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ಪತರುಗುಟ್ಟಿದೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಕೇವಲ 3 ಓವರ್‌ಗಳು ಮುಗಿಯುವಷ್ಟರಲ್ಲಿ ತನ್ನ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಕಂಗಾಲಾಯಿತು. ಕೇವಲ 7 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಬ್ಯಾಟರ್‌ಗಳು ಆರ್‌ಸಿಬಿ ವೇಗಿಗಳ ದಾಳಿಗೆ ಉತ್ತರ ಹುಡುಕಲು ಪರದಾಡಿದರು.

ಪವರ್‌ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕಲೆಹಾಕಿದ್ದು ಕೇವಲ 13 ರನ್! ಆ ಸಮಯದಲ್ಲಿ ತಂಡವು ಈಗಾಗಲೇ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ 17 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ರನ್ ಗಳಿಸಿದ ತಂಡ ಎಂಬ ಬೇಡದ ದಾಖಲೆಯನ್ನು ಡೆಲ್ಲಿ ತನ್ನ ಹೆಸರಿಗೆ ಬರೆದುಕೊಂಡಿದೆ.

ಹಳೆಯ ದಾಖಲೆಗಳು ಪಕ್ಕಕ್ಕೆ:

ಡೆಲ್ಲಿ ಕ್ಯಾಪಿಟಲ್ಸ್ (2024): 13/6 (ಆರ್‌ಸಿಬಿ ವಿರುದ್ಧ)

ಕೊಚ್ಚಿ ಟಸ್ಕರ್ಸ್ (2011): 29/6 (ಡೆಕ್ಕನ್ ಚಾರ್ಜಸ್ ವಿರುದ್ಧ)

ಡೆಲ್ಲಿಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪೈಕಿ ಮೂವರು ಶೂನ್ಯಕ್ಕೆ ಔಟಾಗಿದ್ದು ತಂಡದ ಕುಸಿತಕ್ಕೆ ಪ್ರಮುಖ ಕಾರಣವಾಯಿತು. ಪದಾರ್ಪಣೆ ಪಂದ್ಯವಾಡಿದ ಸಾಹಿಲ್ ಪರಾಖ್, ಸಮೀರ್ ರಿಜ್ವಿ ಮತ್ತು ನಾಯಕ ಅಕ್ಷರ್ ಪಟೇಲ್ ಖಾತೆ ತೆರೆಯುವಲ್ಲಿ ವಿಫಲರಾದರು. ಅನುಭವಿ ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ತಲಾ 1 ರನ್ ಬಾರಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !