ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ: ಅಮೆರಿಕ ಬೆಂಬಲಕ್ಕೆ ಚೀನಾ ಸಿಡಿಮಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದ ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ‘ವಾಷಿಂಗ್ಟನ್‌ಗೆ ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದಿದೆ.

‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂಬ ಅಮೆರಿಕದ ವಕ್ತಾರ ವೇದಾಂತ ಪಟೇಲ್‌ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚೀನಾ, ‘ತನ್ನ ಸ್ವಾರ್ಥ ಭೌಗೋಳಿಕ ರಾಜಕೀಯ ಹಿತಾಸಕ್ತಿಗಾಗಿ ಇತರ ರಾಷ್ಟ್ರಗಳ ವಿವಾದಗಳನ್ನು ಪ್ರಚೋದಿಸುವ ಕಾರ್ಯವನ್ನು ಬಿಡಬೇಕು’ ಎಂದು ಎಚ್ಚರಿಸಿದೆ.

‘ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ತನಗೆ ಸೇರಿದ ಜಾಗವೆಂದು ಏಕಪಕ್ಷೀಯವಾಗಿ ಹಕ್ಕುಸಾಧಿಸುವ ಚೀನಾದ ಪ್ರಯತ್ನವನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ’ ಎಂದು ಪಟೇಲ್ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್‌, ‘ಅಮೆರಿಕದ ಹೇಳಿಕೆಯನ್ನು ಚೀನಾ ಕಡಾಖಂಡಿತವಾಗಿ ತಿರಸ್ಕರಿಸುತ್ತದೆ. ಭಾರತ ಮತ್ತು ಚೀನಾ ನಡುವಿನ ಗಡಿ ಗುರುತಿಸುವ ಕಾರ್ಯ ಪೂರ್ಣಗೊಂಡಿಲ್ಲ. ಝಾಂಗ್ನಾನ್‌ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ಎಂದೆಂದಿಗೂ ಚೀನಾದ ಭಾಗ. ಇದನ್ನು ಯಾರೂ ನಿರಾಕರಿಸಲಾಗದ ಮೂಲ ಸತ್ಯ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಚೀನಾದ ಸೇನೆ ಈ ಭಾಗದ ಮೇಲೆ ಹಕ್ಕು ಸಾಧಿಸಲು ಮುಂದಾದ ನಂತರ ಅಮೆರಿಕ ಈ ಹೇಳಿಕೆ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!