ಮಹಿಳೆಯ ಅಹವಾಲಿನೆದುರು ಅಹಂಕಾರ ಪ್ರದರ್ಶನ- ಅರವಿಂದ ಲಿಂಬಾವಳಿಗೆ ನೆಟ್ಟಿಗರ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಹವಾಲು ಹೇಳಲು ಬಂದ ಮಹಿಳೆಯ ಬಳಿ ಶಾಸಕ ಅರವಿಂದ ಲಿಂಬಾವಳಿ ಅಂಹಕಾರದ ವರ್ತನೆ ತೋರಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಬಳಿ ಸಮಸ್ಯೆ ಹೇಳಲು ಬಂದ ಮಹಿಳೆಯೊಂದಿಗೆ ಈ ರೀತಿಯಾಗಿ ದರ್ಪ ತೋರಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

ಮಹದೇವಪುರ ಶಾಸಕರಾದ ಬಿಜೆಪಿಯ ಅರವಿಂದ ಲಿಂಬಾವಳಿಯವರು ಕ್ಷೇತ್ರದಲ್ಲಿ ಮಳೆಯಿಂದಾದ ಸಮಸ್ಯೆಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ತಮ್ಮ ಅಹವಾಲು ಪತ್ರದೊಂದಿಗೆ ಶಾಸಕರ ಬಳಿ ಅಹವಾಲು ಹೇಳಲು ಬಂದಿದ್ದಾರೆ. ಆದರೆ ಮಹಿಳೆಯ ಅಹವಾಲನ್ನು ಕೇಳದ ಅರವಿಂದ ಲಿಂಬಾವಳಿಯವರು ಕೋಪದಿಂದ ಜೋರಾಗಿ ಮಾತನಾಡಿ ಮಹಿಳೆಯನ್ನು ಗದರಿದ್ದಾರೆ. ಮಹಿಳೆ ಸುಮ್ಮನಾಗದಿದ್ದಾಗ ಆಕೆಯ ಕೈಯ್ಯಲ್ಲಿರುವ ದಾಖಲೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ. ಮಹಿಳೆ ಮತ್ತೂ ತನ್ನ ಮಾತನ್ನು ಮುಂದುವರಿಸಿದಾಗ ಶಾಸಕರು ಇನ್ನೂ ಜೋರಾಗಿ ರೇಗಾಡಿ ಕೊನೆಗೆ ಮಹಿಳಾಪೊಲೀಸರ ಬಳಿ ಅಕೆಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಶಾಸಕರ ಈ ರೀತಿಯ ದುರಹಂಕಾರದ ನಡೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಅರವಿಂದ ಲಿಂಬಾವಳಿಯವರ ಪುತ್ರಿಯು ಸಿಗ್ನಲ್‌ ಜಂಪ್‌ ಮಾಡಿದ್ದಕ್ಕೆ ಪ್ರಶ್ನಿಸಿದ ಪೋಲೀಸರ ವಿರುದ್ಧವೇ ದರ್ಪ ತೋರಿಸಿದ್ದ ಘಟನೆಯನ್ನೂ ಉಲ್ಲೇಖಿಸಿ ಹಲವರು ಲಿಂಬಾವಳಿಯವರ ನಡೆಯನ್ನು ಟೀಕಿಸಿದ್ದಾರೆ. ದುರಹಂಕಾರಿ ವಿವಿಐಪಿ ಸಂಸ್ಕೃತಿಯು ಲಿಂಬಾವಳಿ ಕುಟುಂಬದಲ್ಲಿಯೇ ಇದೆ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲಾಗುತ್ತಿದೆ.
ಕಾಂಗ್ರೆಸ್‌ ನ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈ ಘಟನೆಯ ವಿಡಿಯೋವನ್ನು ಉಲ್ಲೇಖಿಸಿ “ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ. ಅವರು ಮಹಿಳೆಯ ಕ್ಷಮೆ ಕೇಳುತ್ತಾರಾ?” ಎಂದು ಪ್ರಶ್ನಿಸಿದ್ದರು.

ಅರವಿಂದ ಲಿಂಬಾವಳಿ ಪ್ರತಿಕ್ರಿಯೆ:

ಇನ್ನು ಘಟನೆಯ ಕುರಿತು ಕಾಂಗ್ರೆಸ್‌ ನಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆ ಟ್ವೀಟರ್‌ ನಲ್ಲಿ ಅರವಿಂದ ಲಿಂಬಾವಳಿ ಪ್ರತಿಕ್ರಿಯೆ ನೀಡಿದ್ದು ತಾವು ಮಹಿಳೆಯ ಕ್ಷಮೆ ಕೇಳಲು ಸಿದ್ಧರಿರುವುದಾಗಿ ಹೇಳಿದ್ದಾರೆ.

“ಈ ಬಗ್ಗೆ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ನಿಮ್ಮ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲು ಹೇಳಿ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!